ರಸ್ತೆನಾ? ಹಳ್ಳನಾ? ಇದು ಸವದತ್ತಿಯ ಹಂಚಿನಾಳ ಗ್ರಾಮದ ರಸ್ತೆ ದುಸ್ಥಿತಿ. ಭ್ರಷ್ಟ ಅಧಿಕಾರಿಗಳಿಗೆ ಕೇಳಿಸುತ್ತಿಲ್ವಾ ಗ್ರಾಮಸ್ಥರ ಗೋಳು

ರಸ್ತೆನಾ? ಹಳ್ಳನಾ? ಇದು ಸವದತ್ತಿಯ ಹಂಚಿನಾಳ ಗ್ರಾಮದ ರಸ್ತೆ ದುಸ್ಥಿತಿ | Road or river in Hanchinala village ?

ಇದು ದಶಕಗಳಿಂದಲೂ ಅಭಿವೃದ್ಧಿ ಕಾಣದ ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದ ರಸ್ತೆ… ಇದೇ ರಸ್ತೆಯಲ್ಲಿ ಹಂಚಿನಾಳ ಮಂದಿ ಕಳೆದ ಹತ್ತು ವರ್ಷಗಳಿಂದ ಓಡಾಡುತ್ತಿದ್ದಾರೆ. ಇಲ್ಲಿನ ಜನರಿಗೆ ಬೇರೆ ದಾರಿಯೇ ಇಲ್ಲ. ಹಳ್ಳದಂತಿರೋ ಇದೇ ರಸ್ತೆಯಲ್ಲಿ ಕಷ್ಟಪಟ್ಟು ಮಹಿಳೆಯರು, ಮಕ್ಕಳು ವೃದ್ಧರು, ವಿಕಲಾಂಗರು ಓಡಾಡಬೇಕು.

ಹಂಚಿನಾಳ ಗ್ರಾಮದ ವಾರ್ಡ್‌ ನಂ. 6ರ ಜಿ.ಬಿ ಕಾಲೋನಿಯಲ್ಲಿ ಈ ರಸ್ತೆ ಇದೆ. ಈ ವಾರ್ಡ್‌ ದಶಕಗಳಿಂದ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿದೆ. ಯಾವುದೇ ಮೂಲಭೂತ ಸೌಕರ್ಯ ಇಲ್ಲದೆ ಜನ ಇಲ್ಲಿ ಒದ್ದಾಡುತ್ತಿದ್ದಾರೆ. .

ಬೇಸಿಗೆ ಕಾಲದಲ್ಲಿಯೇ ಈ ರಸ್ತೆಯಲ್ಲಿ ಓಡಾಡೋದು ಕಷ್ಟಸಾಧ್ಯ. ಇನ್ನು ಮಳೆಗಾಲ ಬಂತಂದ್ರೆ ಮುಗಿದೇ ಹೋಯ್ತು, ಸಾರ್ವಜನಿಕರ ಗೋಳು ಕೇಳೋರೇ ಇಲ್ಲ. ಮೊಣ ಕಾಲಿನುದ್ದಕ್ಕೂ ರಸ್ತೆಯಲ್ಲಿ ನೀರು ತುಂಬಿಕೊಂಡಿರುತ್ತೆ. ಈ ಹಳ್ಳದಲ್ಲಿ ಗಾಡಿಯಲ್ಲಿ ಹೋಗೋದಂದ್ರೆ ಸಾವಿನ ಮೇಲೆ ಸವಾರಿ ಮಾಡುದಂತೆ. ಅದೆಷ್ಟೋ ಮಂದಿ ಈ ರಸ್ತೆಯಲ್ಲಿ ಓಡಾಡಿ ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. 

ಇಲ್ಲಿನ ಸಾರ್ವಜನಿಕರು ಕುಡಿಯುವ ನೀರು ತರಲು ಅಥವಾ ಅಗತ್ಯ ವಸ್ತುಗಳನ್ನು ಖರೀದಿಸಲು ಪಟ್ಟಣಕ್ಕೆ ಹೋಗ್ಬೇಕಾದ್ರೆ ಇದೇ ರಸ್ತೆಯನ್ನು ಬಳಸಿಕೊಂಡು ಹೋಗಬೇಕು. ರಸ್ತೆ ಇದ್ದರೂ ನಡೆದುಕೊಂಡೇ ಹೋಗಬೆಕಾದಂತಹ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಏಕೆಂದರೆ ಈ ರಸ್ತೆಯಲ್ಲಿ ವಾಹನ ಓಡಾಡೋಕೇ ಆಗಲ್ಲ.  

ಈ ರಸ್ತೆ ದುರಸ್ಥಿಗೆ 2 ಲಕ್ಷ ರೂಪಾಯಿ ಬಿಡುಗಡೆಯಾಗಿದೆ ಅಂತ ನಾಮಫಲಕವನ್ನೇನೋ  ಹಾಕಿದ್ದಾರೆ. ಆದ್ರೆ ಆ ಹಣದಿಂದ ಯಾವ ಅಧಿಕಾರಿ, ಗುತ್ತಿಗೆದಾರ ಅಭಿವೃದ್ಧಿ ಹೊಂದಿದ್ನೋ ಗೊತ್ತಿಲ್ಲ ಆದ್ರೆ ಹಂಚಿನಾಳ ಗ್ರಾಮ ರಸ್ತೆ ಮಾತ್ರ  ಅಭಿವೃದ್ಧಿಯೇ ಕಾಣಲಿಲ್ಲ.

ಈ ರಸ್ತೆಯನ್ನು ನೋಡಿದ್ರೆ ಕಣ್ಣಿಲ್ಲದವನೂ ಅಯ್ಯೋ ಪಾಪ ಅನ್ನಬೇಕು. ಆದ್ರೆ ಇಲ್ಲಿ ಜಿಲ್ಲಾಡಳಿತ ಹಾಗೂ ಗ್ರಾಮಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳು ಕಣ್ಣಿದ್ದೂ ಕುರುಡರಾಗಿದ್ದಾರೆ.  ರಸ್ತೆಗೆ ಬಿಡುಗಡೆಯಾಗೋ ಹಣವನ್ನು ನುಂಗಿ ಮಜಾ ಮಾಡೋ ಅಧಿಕಾರಿಗಳಿಗೆ ಜನರ ನೋವು ಕಾಣುತ್ತಲೇ ಇಲ್ಲ.

ಅಲ್ಲದೇ ಎಷ್ಟೋ ಬಾರಿ ಇಲ್ಲಿನ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ,ಗ್ರಾಮಪಂಚಾಯಿತಿಗೆ ಮನವಿ ನೀಡಿದ್ದಾರೆ. ಆದ್ರೆ ಹಣವಿಲ್ಲ ಎಂಬ ಕುಟು ನೆಪವೊಡ್ಡಿ ಜನರ ದಾರಿ ತಪ್ಪಿಸುತ್ತಿದ್ದಾರೆ ಅನ್ನೋದು ಸಾರ್ವಜನಿಕರ ದೂರಾಗಿದೆ.

ಈಗಲಾದ್ರೂ ಸವದತ್ತಿ ಶಾಸಕರಾದ ಆನಂದ ಮಾಮನಿಯವರು ಎಚ್ಚೆತ್ತುಕೊಳ್ಳಲಿ. ಜನರ ಬದುಕಿನ ಜೊತೆ ಚಲ್ಲಾಟ ಆಡೋ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಹಂಚಿನಾಳ ಗ್ರಾಮಕ್ಕೆ ಸುಸಜ್ಜಿತವಾದ ರಸ್ತೆ ನಿರ್ಮಿಸಿ ಕೊಡಲಿ  ಎಂಬುದು ವಿಜಯಟೈಮ್ಸ್‌ನ ಆಶಯವಾಗಿದೆ.

ಸವದತ್ತಿಯಿಂದ ಸಿಟಿಜನ್‌ ಜರ್ನಲಿಸ್ಟ್‌ ಪ್ರಶಾಂತ ಹೂಗಾರ, ವಿಜಯಟೈಮ್ಸ್

Exit mobile version