ತಾಲೂಕು ಪಂಚಾಯಿತಿಯನ್ನು ರದ್ದು ಮಾಡಲು ಸಿದ್ಧತೆ!

ಬೆಂಗಳೂರು, ಫೆ. 04: ಇನ್ನು 4 ತಿಂಗಳಲ್ಲಿ ತಾಪಂ ಮತ್ತು ಜಿಪಂ ಚುನಾವಣೆ ನಡೆಯುವ ಸಾಧ್ಯತೆಯಿದ್ದು, ಸ್ಪರ್ಧಾಕಾಂಕ್ಷಿಗಳು ಭರದ ಸಿದ್ಧತೆಯಲ್ಲಿದ್ದಾರೆ.. ಈ ನಡುವೆ ತಾಲೂಕು ಪಂಚಾಯಿತಿಗಳನ್ನೇ ರದ್ದುಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂಬ ಸುದ್ದಿ ಆಕಾಂಕ್ಷಿಗಳಿಗೆ ಭಾರೀ ತಲೆನೋವು ತರಿಸಿದೆ. ತಾಪಂ ರದ್ದು ಮಾಡುವ ಬಗ್ಗೆ ಈ ಹಿಂದೆಯೂ ಚರ್ಚೆಯಾಗಿತ್ತು. ಸಚಿವ ಕೆ.ಎಸ್. ಈಶ್ವರಪ್ಪ ಕೂಡ ಗುರುವಾರ ಇದಕ್ಕೆ ಧ್ವನಿಗೂಡಿಸಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಿಷ್ಠಗೊಳಿಸುವ ಉದ್ದೇಶದಿಂದ ತಾಲೂಕು ಪಂಚಾಯತಿಗಳನ್ನು ರದ್ದುಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದರು. 

ಜೆಡಿಎಸ್ ಸದಸ್ಯ ವೆಂಕಟರಾವ್ ನಾಡಗೌಡ ಅವರು , ತಾಲೂಕು ಪಂಚಾಯಿತಿಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ತಾಪಂ ರದ್ದುಪಡಿಸುವ ಮೂಲಕ ಮೂರು ಹಂತಗಳ ಪಂಚಾಯಿತಿ ವ್ಯವಸ್ಥೆ ಬದಲು ಎರಡೇ ಹಂತಗಳ ಪಂಚಾಯಿತಿ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದರು.

ಇದಕ್ಕೆ ಈಶ್ವರಪ್ಪ, ಜಿಪಂ, ತಾಪಂ ಹಾಗೂ ಗ್ರಾಪಂ ಪೈಕಿ ತಾಲೂಕು ಪಂಚಾಯಿತಿ ಬೇಕಿಲ್ಲ ಎಂಬ ಅಭಿಪ್ರಾಯ ಹಲವರಲ್ಲಿದೆ. ಪರಿಣಾಮಕಾರಿಯಾಗಿ ಕೆಲಸ ಮಾಡಲು ತಾಪಂಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ 3 ಹಂತಗಳ ಪಂಚಾಯಿತಿ ವ್ಯವಸ್ಥೆ ಬದಲು ಎರಡು ಹಂತಗಳ ಪಂಚಾಯಿತಿಯನ್ನು ಜಾರಿಗೆ ತರಬೇಕು ಎಂಬ ಭಾವನೆ ಬಹುತೇಕರಲ್ಲಿದೆ ಎಂದರು. ಅಲ್ಲದೆ ತಾಪಂಗಳಲ್ಲಿ ಪರಿಣಾಮಕಾರಿ ಕೆಲಸ ಮಾಡೋಕೆ ಆಗಲ್ಲ ಎಂದು ಈ ಬಾರಿ ಹಲವರು ಗ್ರಾಪಂ ಚುನಾವಣೆಗೆ ಸ್ಪರ್ಧಿಸಿದ್ದರು ಎಂದರು. ಜಿಪಂ, ತಾಪಂ ಹಾಗೂ ಗ್ರಾಪಂ ಕೇಂದ್ರದ ಕಾನೂನಿನ ಮೂಲಕ ಅಸ್ತಿತ್ವಕ್ಕೆ ಬಂದವು. ಮೂರು ಹಂತಗಳ ಪಂಚಾಯಿತಿ ವ್ಯವಸ್ಥೆಯನ್ನು ಎರಡು ಹಂತಗಳಿಗೆ ಇಳಿಸುವ ಬಗ್ಗೆ ನಾವೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇದು ದೇಶದ ಬಹುತೇಕ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ವ್ಯವಸ್ಥೆ. ಯಾವ ರಾಜ್ಯ 20 ಲಕ್ಷಕ್ಕೂ ಕಡಿಮೆ ಜನಸಂಖ್ಯೆ ಹೊಂದಿದೆಯೋ ಆ ರಾಜ್ಯಗಳಿಗೆ ಮಾತ್ರ ಇದರಿಂದ ವಿನಾಯಿತಿ ಇದೆ. ಈ ಕುರಿತು ಶಾಸಕರು ಮತ್ತಷ್ಟು ಅಭಿಪ್ರಾಯವನ್ನು ನೀಡಿದರೆ ಸರ್ಕಾರ ಮುಂದಿನ ಹೆಜ್ಜೆ ಇಡಲು ಅನುಕೂಲವಾಗುತ್ತೆ. ತಾಪಂ ರದ್ದುಗೊಳಿಸಿ ಎರಡೇ ಹಂತಗಳ ಪಂಚಾಯಿತಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಕೇಂದ್ರಕ್ಕೆ ಶಿಫಾರಸು ಮಾಡಬಹುದು ಎಂದರು.

Exit mobile version