ಬನಾರಸ್‌ ವಿವಿಗೆ ಸಂದರ್ಶಕ ಉಪನ್ಯಾಸಕಿಯಾಗಿ ರಿಲಯನ್ಸ್ ಫೌಂಡೆಶನ್ನ ಅಧ್ಯಕ್ಷೆ ನೀತಾ ಅಂಬಾನಿ

ಲಕ್ನೋ, ಮಾ. 15: ದೇಶದ ಅತ್ಯಂತ ದೊಡ್ಡ ವ್ಯಾಪಾರ ಸಂಸ್ಥೆ ರಿಲಯನ್ಸ್ ಫೌಂಡೆಶನ್ ನ ಅಧ್ಯಕ್ಷೆ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕಿ ನೀತಾ ಅಂಬಾನಿ ಬನಾರಸ್‌ನ ಹಿಂದೂ ವಿಶ್ವವಿದ್ಯಾಲಯದಿಂದ ಸಮಾಜ ವಿಜ್ಞಾನ ವಿಷಯಕ್ಕೆ ಸಂದರ್ಶಕ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುವಂತೆ ಪ್ರಸ್ತಾಪವನ್ನು ಸ್ವೀಕರಿಸಿದ್ದಾರೆ ಎಂಬ ಮಾಹಿತಿ ದೊರಕಿದೆ.

ಬನಾರಸ್ ನ ಹಿಂದೂ ವಿಶ್ವವಿದ್ಯಾಲಯದ ಮಹಿಳಾ ಅಭಿವೃದ್ಧಿ ಅಧ್ಯಯನ ಕೇಂದ್ರವು ನೀತಾ ಅಂಬಾನಿಯವರನ್ನು ವಿಶ್ವವಿದ್ಯಾಲಯದ ಹಾಗೂ ಕೇಂದ್ರದ ಭಾಗವಾಗುವಂತೆ ಕೇಳಿಕೊಂಡಿದೆ. ಸದ್ಯ, ಈ ಪ್ರಸ್ತಾಪವನ್ನು ನೀತಾ ಅಂಬಾನಿಯವರ ಕಚೇರಿ ಸ್ವೀಕರಿಸಿದ್ದು, ನೀತಾ ಅಂಬಾನಿಯವರು ಇದಕ್ಕೆ ಒಪ್ಪಿದ್ದಾರೋ, ಇಲ್ಲವೋ ಎಂಬ ವಿಚಾರದ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ತಿಳಿದು ಬಂದಿಲ್ಲ.

ಇನ್ನು, ವಿಶ್ವವಿದ್ಯಾಲಯವು, ನೀತಾ ಅಂಬಾನಿಯವರ ಕಚೇರಿಯಿಂದ ಮೌಖಿತ ದೃಢೀಕರಣವನ್ನು ನ್ವೀಕರಿಸಿದ್ದು, ಲಿಖಿತ ಒಪ್ಪಿಗೆಗಾಗಿ ಕಾಯುತ್ತಿದೆ ಎಂಬ ಮಾಹಿತಿ ಹೊರ ಬಂದಿದೆ.

ವಿದ್ಯಾರ್ಥಿನಿಯರಿಗೆ ಪಾಠ ಹೇಳಲು ನಿತಾ ಅಂಬಾನಿಯವರು ಶ್ರೇಷ್ಠ ವ್ಯಕ್ತಿ. ಅವರ ಉದ್ಯಮ ಕ್ಷೇತ್ರ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿನ ಅಪಾರ ಅನುಭವ ವಿದ್ಯಾರ್ಥಿನಿಯರ ಅಧ್ಯಯನದ ಪಾಲಿಗೆ ಬಹುದೊಡ್ಡ ಆಸ್ತಿ ಆಗಲಿದೆ ಎನ್ನುವುದರಲ್ಲಿ ಸಂಶಯ ಬೇಕಿಲ್ಲ. ಕೇಂದ್ರ ಸರ್ಕಾರದ ನೂತನ ಶಿಕ್ಷಣ ನೀತಿಯ ಪ್ರಕಾರ ಅಧ್ಯಯನವನ್ನು ಉದ್ಯಮಶೀಲತೆಯೊಂದಿಗೆ ಜೋಡಿಸುವುದು ನಮ್ಮ ಮುಖ್ಯ ಉದ್ದೇಶ ಎಂದು ಬನಾರಸ್ ಹಿಂದೂ ವಿಶ್ವ ವಿದ್ಯಾಲಯದ ಹಿರಿಯ ಉಪನ್ಯಾಸಕ ಪ್ರೊ. ಕೌಶಲ್ ಕಿಶೋರ್ ಹೇಳಿದ್ದಾರೆ.

Exit mobile version