ನುಂಗುವ ಔಷಧದ ರೂಪದಲ್ಲಿ ರೆಮ್​ಡೆಸಿವಿರ್​: ಔಷಧ ನಿಯಂತ್ರಕರ ಅನುಮತಿಗೆ ಅರ್ಜಿ

ದೆಹಲಿ, ಏ. 19: ಜುಬಿಲಿಯಿಂಟ್ ಫಾರ್ಮೊವಾ ಲಿಮಿಟೆಡ್​ನ ಅಂಗಸಂಸ್ಥೆಯಾದ ಜುಬಿಲಿಯಂಟ್ ಫಾರ್ಮಾ ಲಿಮಿಟೆಡ್ ಕಂಪನಿಯು ನುಂಗುವ ರೂಪದ (ಓರಲ್) ರೆಮ್​ಡೆಸಿವಿರ್ ಔಷಧವನ್ನು ಅಭಿವೃದ್ಧಿಪಡಿಸಿದೆ. ಈಗಾಗಲೇ ಪ್ರಾಥಮಿಕ ಹಂತದ ಸುರಕ್ಷಾ ಪ್ರಯೋಗಗಳು ಸಂಪೂರ್ಣಗೊಂಡಿದ್ದು, ಭಾರತ ಔಷಧ ಮಹಾ ನಿಯಂತ್ರಕರ ಬಳಿ (Drug Controller General of India – DCGI) ಉನ್ನತ ಹಂತದ ಪ್ರಯೋಗಗಳಿಗೆ ಅನುಮತಿ ಕೋರಿ ಸಂಸ್ಥೆಯು ಅರ್ಜಿ ಸಲ್ಲಿಸಿದೆ.

ಅಮೆರಿಕದ ಎಫ್​ಡಿಎ (Food and Drug Administration – FDA) ಸಂಪೂರ್ಣ ಅನುಮೋದನೆ ನೀಡಿರುವ ಮೊದಲ ಮತ್ತು ಏಕೈಕ ಔಷಧ ರೆಮ್​ಡೆಸಿವಿರ್. ರೆಮ್​ಡಿಸಿವಿರ್​ನ ಈ ಹೊಸ ರೂಪಕ್ಕೆ ಅನುಮೋದನೆ ದೊರೆತರೆ ಇಂಜೆಕ್ಷನ್​ ಪೂರೈಕೆಗಾಗಿ ಫಾರ್ಮಾ ಕಂಪನಿಗಳ ಮೇಲಿರುವ ಒತ್ತಡವೂ ತುಸು ಕಡಿಮೆಯಾಗುತ್ತದೆ. ಕೋವಿಡ್-19 ರೋಗಿಗಳಿಗೆ ಔಷಧ ಸಿಗುವುದರಲ್ಲಿ ಇರುವ ತೊಂದರೆಯೂ ತಪ್ಪುತ್ತದೆ. ಈ ಔಷಧಕ್ಕೆ ಸಂಬಂಧಿಸಿದಂತೆ ಪ್ರಿಕ್ಲಿನಿಕಲ್ ಮತ್ತು ಸ್ವಯಂಸೇವಕರ ಮೇಲೆ ನಡೆಸಿದ ಅಧ್ಯಯನಗಳು ಪರಿಣಾಮಕಾರಿಯಾಗಿವೆ. ಇಂಜೆಕ್ಷನ್ ರೂಪಕ್ಕೆ ಹೋಲಿಸಿದರೆ ನುಂಗುವ ರೂಪದ ರೆಮ್​ಡೆಸಿವಿರ್​ನ ಅಡ್ಡಪರಿಣಾಮಗಳು ಕಡಿಮೆ ಎಂದು ಕಂಪನಿ ಹೇಳಿಕೊಂಡಿದೆ.

‘ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹೊತ್ತಿನಲ್ಲಿ ಒಂದು ಹೊಸ ಸುದ್ದಿ ಹಂಚಿಕೊಳ್ಳುತ್ತಿದ್ದೇವೆ. ನಮ್ಮ ಪ್ರಸ್ತಾವಕ್ಕೆ ಅನುಮತಿ ಸಿಕ್ಕರೆ ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡುವ ಸುಲಭ ಮತ್ತು ಪರಿಣಾಮಕಾರಿ ಮಾರ್ಗವನ್ನು ಪರಿಚಯಿಸುವುದಷ್ಟೇ ಅಲ್ಲ, ಕೋವಿಡ್-19 ಚಿಕಿತ್ಸೆಗೆ ನಮ್ಮಿಂದಾದ ರೀತಿಯಲ್ಲಿ ಸಹಕರಿಸುತ್ತೇವೆ,’ ಎಂದು ಜುಬಿಲಿಯಂಟ್ ಫಾರ್ಮೊವಾ ಕಂಪನಿಯ ಅಧ್ಯಕ್ಷ ಶ್ಯಾಮ್ ಎಸ್.ಭಾರತೀಯ ತಿಳಿಸಿದ್ದಾರೆ.

Exit mobile version