ರೆಮ್‌ಡಿಸಿವಿರ್‌ ವೈಜ್ಞಾನಿಕವಾಗಿ ಲೈಫ್ ಸೇವಿಂಗ್ ಡ್ರಗ್ ಅಲ್ಲ: ಸಚಿವ ಸುಧಾಕರ್

ಮೈಸೂರು, ಏ. 22: ಕೋವಿಡ್‌ ಸೋಂಕಿತರ ಚಿಕಿತ್ಸೆಗೆ ರೆಮ್‌ಡಿಸಿವಿರ್‌ಗಿಂತ ಸ್ಟೆರಾಯಿಡ್‌‌ ಪರಿಣಾಮಕಾರಿ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸಂಜೀವಿನಿ ಎಂದು ಬಿಂಬಿತವಾಗಿರುವ ರೆಮ್‌ಡಿಸಿವಿರ್‌ ವೈಜ್ಞಾನಿಕವಾಗಿ ಲೈಫ್ ಸೇವಿಂಗ್ ಡ್ರಗ್ (ಜೀವ ಉಳಿಸುವ ಔಷಧ) ಅಲ್ಲ. ಜನಸಾಮಾನ್ಯರಲ್ಲಿ ಈ ರೀತಿಯ ಅಭಿಪ್ರಾಯ ಮೂಡಿದೆ ಅಷ್ಟೇ. ವಿಶ್ಚ ಆರೋಗ್ಯ ಸಂಸ್ಥೆಯ ಪಟ್ಟಿಯಲ್ಲೂ ರೆಮ್‌ಡಿಸಿವಿರ್‌ ಇಲ್ಲ. ನಾನು ವೈದ್ಯನಾಗಿ ಹೇಳಬೇಕೆಂದರೆ ಅದರ ಬದಲು ಸ್ಟೆರಾಯಿಡ್‌ ಪರಿಣಾಮಕಾರಿಯಾಗಿದೆ. ಅದಕ್ಕಿಂತ ಕಡಿಮೆ ದರದ ಪರ್ಯಾಯ ಔಷಧಿಗಳಿವೆ ಎಂದು ತಿಳಿಸಿದರು.

ಕೊರೊನಾ ಕಡಿಮೆಯಾದ ಹಿನ್ನೆಲೆ ರೆಮ್‌ಡಿಸಿವಿರ್‌ ಉತ್ಪಾದನೆ ನಿಲ್ಲಿಸಲಾಗಿತ್ತು. ಈಗ ಮತ್ತೆ ಕೊರೊನಾ ಜಾಸ್ತಿಯಾಗಿದ್ದು, ಬೇಡಿಕೆ ಹೆಚ್ಚಾಗಿದೆ. ಸ್ವಲ್ಪ ದಿನದಲ್ಲಿ ಪೂರೈಕೆ ಸರಿಯಾಗುತ್ತದೆ. ದೇಶದಲ್ಲಿ 8 ರಿಂದ 9 ಕಂಪನಿಗಳು ಮಾತ್ರ ರೆಮ್‌ಡಿಸಿವಿರ್ ಉತ್ಪಾದಿಸುತ್ತಿವೆ ಎಂದರು.

ಬೆಂಗಳೂರಿನಲ್ಲಿ ಆಮ್ಲಜನಕ ಸಮಸ್ಯೆ ವಿಚಾರವಾಗಿ ಮಾತನಾಡಿ, ಇಂದು ಆಮ್ಲಜನಕ ಸಮಸ್ಯೆ ಬಗೆಹರಿಯಲಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆಯಲಾಗಿದೆ. ಮುಂದಿನ ತಿಂಗಳವರೆಗೂ ಬೇಕಾಗುವ ಆಮ್ಲಜನಕ ಪೂರೈಕೆಗೆ ಮನವಿ‌ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಉಚಿತವಾಗಿ ಕೋವಿಡ್‌ ಲಸಿಕೆ ನೀಡುವ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು. ಕೇಂದ್ರ ಸರ್ಕಾರ ಲಸಿಕೆ ವಿಚಾರದಲ್ಲಿ ತಾರತಮ್ಯ ಮಾಡುತ್ತಿಲ್ಲ. ಪ್ರತಿಪಕ್ಷಗಳು ವಿನಾಕಾರಣ ಆರೋಪ ಮಾಡುತ್ತಿವೆ. ರಾಜಸ್ಥಾನಕ್ಕೆ ಲಸಿಕೆ ಅಮೆರಿಕಾದಿ‌ಂದ ತಗೆದುಕೊಂಡು ಬಂದರಾ? ಎಂದು ಲೇವಡಿ ಮಾಡಿದ ಅವರು, ಎಲುಬಿಲ್ಲದ ನಾಲಿಗೆ ಅಂತಾ ಏನೇನೋ ಮಾತನಾಡಬಾರದು. ಆಡಳಿತ ಪಕ್ಷದವರಾಗಲಿ, ವಿರೋಧ ಪಕ್ಷದವರಾಗಲಿ ಕೊರೊ‌ನಾ ಬಗ್ಗೆ ಆರೋಪ ಮಾಡಿದರೆ ಸಣ್ಣವರಾಗುತ್ತಾರೆ ಎಂದರು.

Exit mobile version