ಭರವಸೆ ಮೂಡಿಸಿದ ‘ಬನಾರಸ್’ ; ಟೈಮ್ ಟ್ರಾವೆಲ್ ಜೊತೆಗೊಂದು ಪ್ರೇಮಕಥೆಯ ಅನಾವರಣ

Sandalwood : ನಿರ್ದೇಶಕ ಜಯತೀರ್ಥ ಎಂದ ತಕ್ಷಣ ನೆನಪಾಗುವುದು ‘ಬೆಲ್ ಬಾಟಂ’(Bell Bottom) ಸಿನಿಮಾ. ಹೌದು, ಸ್ಯಾಂಡಲ್‌ವುಡ್‌ನಲ್ಲಿ(Review Of Banaras) ವಿಭಿನ್ನ ಮಾದರಿಯ ಸಿನಿಮಾಗಳಿಂದಲೇ ಗುರುತಿಸಿಕೊಂಡವರು ಜಯತೀರ್ಥ.

‘ಬೆಲ್ ಬಾಟಂ’ ಸಿನಿಮಾದಲ್ಲಿ ಕಾಮಿಡಿ ಥ್ರಿಲ್ಲರ್ ಕಥೆಯ ಎಳೆಯನ್ನು ಇಟ್ಟುಕೊಂಡು ಗೆದ್ದಿದ್ದ ಜಯತೀರ್ಥ, ಈ ಬಾರಿ ಪ್ರೇಕ್ಷಕರ ತಲೆಗೆ ಕೊಂಚ ಕೆಲಸ ಕೊಡುವಂತಹ ಪ್ರಯತ್ನವನ್ನು ತಮ್ಮ ‘ಬನಾರಸ್’(Review Of Banaras) ಸಿನಿಮಾದಲ್ಲಿ ಮಾಡಿದ್ದಾರೆ.

ಹೊಸ ನಟ ಝೈದ್ ಖಾನ್ ‘ಬನಾರಸ್‌’ ಮೂಲಕ ಹೀರೋ ಆಗಿ ಲಾಂಚ್ ಆಗಿದ್ದಾರೆ.

ಮೊದಲ ಚಿತ್ರದಲ್ಲೇ ಝೈದ್ ಖಾನ್‌ ಚಿತ್ರರಂಗದಲ್ಲಿ ನೆಲೆಯೂರುವ ಭರವಸೆ ಮೂಡಿಸಿದ್ದಾರೆ. ಕೇವಲ ನಟನೆಯಷ್ಟೇ ಅಲ್ಲ, ಡ್ಯಾನ್ಸ್ ಫೈಟ್ಸ್‌ನಲ್ಲಿ ಕೂಡ ಫಸ್ಟ್ ಕ್ಲಾಸ್‌ನಲ್ಲಿ ಪಾಸಾಗಿದ್ದಾರೆ.

ಝೈದ್ ಖಾನ್‌ ಗೆ ಬೇರೆಯವರು ಡಬ್ಬಿಂಗ್ ಮಾಡಿದ್ದರೂ ಕೂಡ ಅದು ಸೂಕ್ತವಾಗಿ ಹೊಂದಿಕೊಂಡಿರುವುದು ವಿಶೇಷ.

ಇದನ್ನೂ ಓದಿ : https://vijayatimes.com/bharat-ratna-indira-gandhi/


ಈಗಾಗಲೇ ಹೇಳಿದಂತೆ ಪ್ರತಿ ಬಾರಿಯೂ ವಿಭಿನ್ನ ರೀತಿಯ ಸಿನಿಮಾಗಳನ್ನು ಮಾಡುವುದು ಜಯತೀರ್ಥ ಅವರ ವಿಶೇಷತೆ. ಅದೇ ರೀತಿ ಈ ಬಾರಿ ಅವರು ‘ಬನಾರಸ್’ ಸಿನಿಮಾಗೆ ಆಯ್ದುಕೊಂಡಿರುವುದು ಟೈಮ್ ಲೂಪ್‌ ಎನ್ನುವ ಪರಿಕಲ್ಪನೆ.

ಟೈಮ್ ಲೂಪ್ ಎಂದರೆ, ಒಂದೇ ರೀತಿಯ ಪರಿಸ್ಥಿತಿಗಳು ಮತ್ತೆ ಮತ್ತೆ ಪುನರಾವರ್ತಿತವಾಗುವುದು.

ಒಂದೇ ಕಾಲಘಟ್ಟದಲ್ಲಿ ಸಿಕ್ಕಿಹಾಕಿಕೊಂಡು, ಅಲ್ಲಿಯೇ ಸುತ್ತುವುದನ್ನು ಟೈಮ್‌ ಲೂಪ್ ಪರಿಕಲ್ಪನೆಯಿರುವ ಸಿನಿಮಾಗಳಲ್ಲಿ ನೋಡಬಹುದು.

ಬನಾರಸ್‌ ಸಿನಿಮಾದಲ್ಲಿ ಇಂತದ್ದೇ ಪ್ರಯೋಗ ಮಾಡಿದ್ದಾರೆ ಜಯತೀರ್ಥ. ಸಿನಿಮಾದ ಕಥೆಯ ಎಳೆ ಹೀಗಿದೆ, ಕಾಲೇಜು ಓದುತ್ತಿರುವ ಸಿದ್ದಾರ್ಥ ಸಿಂಹ (ಝೈದ್ ಖಾನ್) ಆಗರ್ಭ ಶ್ರೀಮಂತ ಕುಟುಂಬದವನು.

ಅಪ್ಪ-ಅಮ್ಮನನ್ನು ಕಳೆದುಕೊಂಡು ಚಿಕ್ಕಪ್ಪನ ಆಶ್ರಯದಲ್ಲಿರುವ ದನಿಗೆ (ಸೋನಲ್) ಉತ್ತಮ ಹಾಡುಗಾರ್ತಿ ಆಗಬೇಕೆಂಬ ಗುರಿಯಿದೆ.

ಭಿನ್ನ ಆಲೋಚನೆ, ಅಭಿರುಚಿಗಳುಳ್ಳ ಇವರಿಬ್ಬರು ಒಂದಾಗಲು ಕಾರಣವಾಗುವುದು ಟೈಮ್‌ ಟ್ರಾವೆಲ್ ಎನ್ನುವ ಪರಿಕಲ್ಪನೆ. ಇದರ ನಂತರ ಕಥೆ ಬೆಂಗಳೂರಿನಿಂದ ಬನಾರಸ್‌ಗೆ ಶಿಫ್ಟ್ ಆಗುತ್ತದೆ, ಪೂರ್ತಿ ಕಥೆ ಅಲ್ಲಿಯೇ ಸಾಗುತ್ತದೆ.

ಇದಕ್ಕೆ ಕಾರಣವೇನು, ನಾಯಕ ನಾಯಕಿ ಬನಾರಸ್‌ಗೆ ಹೋಗಿದ್ದೇಕೆ, ನಿಜವಾಗಿಯೂ ಟೈಮ್ ಲೂಪ್ ಇದೆಯೇ, ಇಂತಹ ಪ್ರಶ್ನೆಗಳನ್ನು ಹೊತ್ತು ಸಾಗುತ್ತ, ಕುತೂಹಲ ಕೆರಳಿಸುತ್ತದೆ ‘ಬನಾರಸ್‌’ ಸಿನಿಮಾ.

ತಂದೆಯ ಮಾತನ್ನು ಚಾಚೂ ತಪ್ಪದೇ ಪಾಲಿಸುವ ಮಗ, ಹುಡುಗಿಯೊಬ್ಬಳಿಗಾಗಿ ಬನಾರಸ್‌ಗೆ ಹೋಗುತ್ತಾನೆ.

ಇದನ್ನೂ ಓದಿ : https://vijayatimes.com/694-chargesheet-applied/

ಆ ಹುಡುಗಿ ಮತ್ತು ಈತನ ನಡುವಿನ ಘಟನೆಯೊಂದು ಬನಾರಸ್‌ಗೆ ತೆರಳಲು ಮೂಲವಾಗುತ್ತದೆ, ಇಲ್ಲಿಂದಲೇ ಸಿನಿಮಾದ ನಿಜವಾದ ಪಯಣ ಆರಂಭವಾಗುತ್ತದೆ.

ಸಿನಿಮಾ ಪ್ರಾರಂಭವಾದ ಮೊದಲ 15 ನಿಮಿಷ ಭಾರಿ ಕುತೂಹಲ ಹುಟ್ಟಿಸಿ, ನಂತರ ಒಂದು ಸಾಮಾನ್ಯ ಲವ್ ಸ್ಟೋರಿ ರೀತಿಯಲ್ಲಿ ಇಂಟರ್ವಲ್‌ವರೆಗೂ ಸಾಗುವ ‘ಬನಾರಸ್‌’ ಅಷ್ಟೇನೂ ಅದ್ಭುತ ಎನಿಸುವುದಿಲ್ಲ.

ಆದರೆ ಇಂಟರ್ವಲ್ ನಲ್ಲಿ ಸಿಗುವ ಒಂದು ತಿರುವು ಸೆಕೆಂಡ್‌ ಹಾಫ್‌ಗೆ ಭರ್ಜರಿ ಲೀಡ್ ನೀಡುತ್ತದೆ. ಅಲ್ಲಿಂದ ಸಾಕಷ್ಟು ಟ್ವಿಸ್ಟ್‌ಗಳು ಎದುರಾಗುತ್ತಾ ಪ್ರೇಕ್ಷಕರನ್ನು ಹಿಡಿದಿಡುತ್ತದೆ.

ಟೈಮ್ ಲೂಪ್ ಮಾದರಿಯ ಕಥೆಯಲ್ಲಿ ಒಂದೇ ಸೀನ್‌ ಪದೇ ಪದೇ ಪುನರಾವರ್ತನೆಯಾಗುವುದು ಕೆಲವು ಸಂದರ್ಭದಲ್ಲಿ ಪ್ರೇಕ್ಷಕರಿಗೆ ಬೋರ್ ಎನಿಸುತ್ತದೆ.

ಲವ್ ಸ್ಟೋರಿಯಾಗಿ ಪ್ರಾರಂಭವಾಗುವ ‘ಬನಾರಸ್’ ಆನಂತರ ಸೈನ್ಸ್ ಫಿಕ್ಷನ್ ಆಗಿ ಬದಲಾಗುತ್ತದೆ. ಸಿನಿಮಾದ ಛಾಯಾಗ್ರಾಹಕ ಅದ್ವೈತ ಗುರುಮೂರ್ತಿ ಅಚ್ಚುಕಟ್ಟಾಗಿ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ.

ಅಜನೀಶ್ ಲೋಕನಾಥ್(Ajaneesh Loknath) ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಬೆಳಕಿನ ಕವಿತೆ, ಮಾಯಾಗಂಗೆ, ಹೆಣ್ಣು ಹಡೆಯಲೂ ಬೇಡ ಹಾಡುಗಳು ಈಗಾಗಲೇ ಸದ್ದು ಮಾಡುತ್ತಿವೆ.

ನಾಯಕಿ ಸೋನಾಲ್‌ ಮೊಂತೆರೋ ದನಿ ಪಾತ್ರದ ಮೂಲಕ ಮಿಂಚಿದ್ದಾರೆ. ಪಕ್ಕದ್ಮನೆ ಹುಡುಗಿಯಂತೆ ಫೀಲ್ ನೀಡುವ ಸೋನಲ್ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ.

ಶಂಭು ಎನ್ನುವ ಮಹತ್ವದ ಪಾತ್ರದಲ್ಲಿ ನಟ ಸುಜಯ್ ಶಾಸ್ತ್ರಿ ಮಿಂಚಿದ್ದಾರೆ. ಕೇವಲ ಕಾಮಿಡಿಯಷ್ಟೇ ಅಲ್ಲ, ಎಮೋಷನಲ್ ಆಗಿಯೂ ಅವರು ಇಷ್ಟವಾಗುತ್ತಾರೆ.

https://fb.watch/gEwHz-w2oG/ ಕತ್ತಲಲ್ಲಿ ಕಳೆದು ಹೋದ ವಿದ್ಯೆ

ನಟಿ ಸಪ್ನಾ ಕೂಡ ಇದ್ದಷ್ಟು ಹೊತ್ತು ಕಾಮಿಡಿ ಮಾಡಿ ನಗಿಸುತ್ತಾರೆ, ಅಪ್ಪನಾಗಿ ಹಿರಿಯ ನಟ ದೇವರಾಜ್‌ ಅವರದ್ದು ಪ್ರಬುದ್ಧ ನಟನೆ. ಅಚ್ಯುತ್ ಕುಮಾರ್ ಹಾಗೂ ಬರ್ಖತ್ ಅಲಿ ಪಾತ್ರಗಳೂ ಸಿನಿಮಾದಲ್ಲಿ ಮಿಂಚುತ್ತವೆ.

ಒಟ್ಟಾರೆಯಾಗಿ ಲವ್ ಸ್ಟೋರಿ ಹಾಗೂ ಸೈನ್ಸ್ ಫಿಕ್ಷನ್ ಇಷ್ಟಪಡುವ ಪ್ರೇಕ್ಷಕರಿಗೆ ‘ಬನಾರಸ್’ ಸಿನಿಮಾ ಮನೋರಂಜನೆಯ ಔತಣವನ್ನೇ ಬಡಿಸುತ್ತದೆ.

Exit mobile version