ರಸ್ತೆ ಕಾಮಗಾರಿ ವಿಳಂಬ; ಮದುವೆ ದಿಬ್ಬಣದ ಬಸ್ ಉರುಳಿ ಮೂವರ ದುರ್ಮರಣ

ತುಮಕೂರು, ಫೆ.19: ಶಿರಾದ ಮಾಳಗಟ್ಟಿ ಬಳಿಯ ಮೇಕೆರಹಳ್ಳಿ ಕ್ರಾಸ್ ಬಳಿ ನಿನ್ನೆ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮದುವೆ ದಿಬ್ಬಣದ ಬಸ್ ಕೆಳಗುರುಳಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.
ಮದುವೆ ದಿಬ್ಬಣದ ಬಸ್ ಅಪಘಾತವಾಗಿದ್ದರಿಂದ ಮದುವೆಗೆ ಹೊರಟವರು ಮಸಣ ಸೇರಿದ್ದಾರೆ. ಮೇಕೆರಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಕೆಳಗುರುಳಿದೆ. 20 ಜನಕ್ಕೂ ಅಧಿಕ ಜನರಿಗೆ ಕೈ, ಕಾಲು ಮುರಿದಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಶಿರಾ ಸರ್ಕಾರಿ ಆಸ್ಪತ್ರೆಗೆ ಮೃತ ದೇಹಗಳನ್ನು ರವಾನೆ ಮಾಡಲಾಗಿದೆ. ಗಾಯಾಳುಗಳನ್ನು ಕೂಡ ಅದೇ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮೃತಪಟ್ಟವರನ್ನು ಕಿಟ್ಟಪ್ಪ ಹಾಗೂ ಭಾಗ್ಯಮ್ಮ ಎಂದು ಗುರುತಿಸಲಾಗಿದೆ. ಇನ್ನೊಬ್ಬರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಈ ದುರಂತಕ್ಕೆ ರಸ್ತೆ ಕಾಮಗಾರಿಯೇ ಕಾರಣ ಎನ್ನಲಾಗಿದೆ. ಮೇಕೆರಹಳ್ಳಿ ಕ್ರಾಸ್ ಬಳಿ ನಾಲ್ಕೈದು ವರ್ಷಗಳಿಂದ ರಸ್ತೆ ಕಾಮಗಾರಿ ನೆನೆಗುದಿಗೆ ಬಿದ್ದಿದೆ.

Exit mobile version