ಉದ್ಘಾಟನೆಗೆ ಮುನ್ನವೇ ರಸ್ತೆ ದುರಸ್ಥಿ ! ಬಯಲಾಯ್ತು ಬೀದರ್-ಮಹಾರಾಷ್ಟ್ರ ರಾಷ್ಟ್ರೀಯ ಹೆದ್ದಾರಿಯ ಕಳಪೆ ಕಾಮಗಾರಿ ಕರ್ಮಕಾಂಡ

Highway in danger ! Bidar -Maharastra highway road work scam is out |

ಇದು ಬೀದರ್‌ ನಗರದ ನೌಬಾದ್‌ನಿಂದ ಕಮಲಾನಗರ ಸಮೀಪದ ಮಹಾರಾಷ್ಟ್ರ ಗಡಿಯವರೆಗೂ ನಿಮರ್ಮಾಣವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿಯ ದೃಶ್ಯ.

ಈ ರಸ್ತೆ ಇನ್ನೂ ಉದ್ಘಾಟನೆಯೇ ಆಗಿಲ್ಲ ಆಗ್ಲೇ ರಸ್ತೆ ತುಂಬಾ ಗುಂಡಿಗಳು, ಹೊಂಡಗಳು. ಈ ರಸ್ತೆಯಲ್ಲಿ ಪ್ರಯಾಣಿಸಬೇಕಾದ್ರೆ ಜನ ಸರ್ಕಸ್‌ ಮಾಡ್ಕೊಂಡೇ ಓಡಾಡಬೇಕು. ಕೇಂದ್ರ ಸರ್ಕಾರದ ಈ ಯೋಜನೆಯಿಂದ ಖುಷಿಪಡಬೇಕಾದ ಜನ, ಈ ರಸ್ತೆಯ ಕಳಪೆ ಕಾಮಗಾರಿಯಿಂದ ನಿತ್ಯ ಶಾಪ ಹಾಕುತ್ತಿದ್ದಾರೆ.

ಬೀದರ್‌ ನಗರದ ಹೊರವಲಯದ ನೌಬಾದ್‌ನಿಂದ ಕಮಲಾನಗರ ಸಮೀಪದಿಂದ ಮಹಾರಾಷ್ಟ್ರದ ಗಡಿವರೆಗೂ ನಿಮರ್ಮಾಣವಾಗುತ್ತಿರುವ ಈ ರಸ್ತೆಯ ಮೊದಲ ಹಂತದ ಕಾಮಗಾರಿ ಸಂಪೂರ್ಣವಾಗಿದೆ. ಆದ್ರೆ ಈ ಸಿಮೆಂಟ್‌ ಕಾಂಕ್ರಿಟ್‌ ದ್ವಿಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಬಿರುಕುಗಳು ಕಾಣಿಸಿಕೊಂಡಿವೆ.

ಒಂದೆಡೆ ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣ ಕಾರ್ಯ, ಇನ್ನೊಂದೆಡೆ ಬಿರುಕು ಬಿಟ್ಟು ರಸ್ತೆಯ ದುರಸ್ಥಿ ಕಾರ್ಯ ನಡೆಯುತ್ತಿದೆ. ಇದರಿಂದಾಗಿ ಜನಸಮಾನ್ಯರು ವಾಹನ ಸವಾರರು ಪರದಾಡುವಂತಹ ಸ್ಥಿತಿ ಎದುರಾಗಿದೆ. ಇದರಿಂದ ನೊಂದ ವಾಹನ ಸವಾರರು ಕಳಪೆ ರಸ್ತೆ ಕಾಮಗಾರಿಯ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

54.37 ಕಿ.ಮೀ ಉದ್ದದ ಈ ಹೆದ್ದಾರಿಗೆ ಸುಮಾರು 396 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇದನ್ನು ಗುಜರಾತ್​ ಮೂಲದ ಕಂಪನಿಯೊಂದು ಗುತ್ತಿಗೆ ವಹಿಸಿಕೊಂಡಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಉಸ್ತುವಾರಿ ನೋಡಿಕೊಳ್ಳುತ್ತಿದೆ. ಮೇಲುಸ್ತುವಾರಿಯನ್ನು ವಹಿಸಿಕೊಂಡಿರುವ ಪ್ರಾಧಿಕಾರವೇ ಈ ಬಗ್ಗೆ ಸರಿಯಾದ ಕ್ರಮವನ್ನು ಕೈಗೊಳ್ಳುತ್ತಿಲ್ಲ.

ಅದಲ್ಲದೇ ಮೂಲಗಳ ಪ್ರಕಾರ ಈ ಹೆದ್ದಾರಿಯ ಒಂದು ಕಿ. ಮೀ ಉದ್ದದ ಕಾಮಗಾರಿಗೆ ಸುಮಾರು 05 ಕೋಟಿ. ರೂ ವ್ಯಯಿಸಲಾಗುತ್ತಿದೆ. ಈ ಹೆದ್ದಾರಿ ಉದ್ಘಾಟನೆಗೂ ಮುನ್ನ ದುರಸ್ತಿಗೆ ಬಂದಿದೆ. ಈ ಕಾಮಗಾರಿಯಲ್ಲಿ ಅಕ್ರಮ ನಡೆಯುತ್ತಿದೆ ಎಂಬುದು ಇಲ್ಲಿನ ಸ್ಥಳಿಯರ ಸಂಶಯವಾಗಿದೆ.

ಈ ಕಾಮಗಾರಿಗೆ 2018ರ ಫೆಬ್ರವರಿಯಲ್ಲಿ ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಚಾಲನೆ ನಿಡಿದ್ದರು. 18 ತಿಂಗಳೊಳಗಾಗಿ ಈ ಕಾಮಗಾರಿಯನ್ನು ಮುಗಿಸಬೇಕೆಂಬುದು ಅಂದಿನ ಘೋಷಣೆಯಾಗಿತ್ತು. ಆದರೆ ಸತತ ಮೂರು ವರ್ಷಗಳು ಕಳೆದರೂ ಕಾಮಾಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದು ಶೋಚನೀಯ.   

ಈಗಾಗಲೇ ಕಾಮಗಾರಿ ಸಂಪೂರ್ಣವಾಗಿರುವ ಹೆದ್ದಾರಿಯ ಅನೇಕ ಕಡೆಗಳಲ್ಲಿ ಬಿರುಕು ಹಾಗೂ ಹೊಂಡಗಳು ಕಾಣಿಸಿಕೊಂಡಿವೆ. ಇನ್ನೂ ಕೆಲವೆಡೆ ರಸ್ತೆಯ ಮೇಲ್ಪದರು ಕಿತ್ತು ಬಂದಿದೆ. ಅದಲ್ಲದೇ ಕೆಲವೆಡೆ ರಸ್ತೆಯು ಸಮತಟ್ಟಾಗಿಲ್ಲ ಇದರಿಂದಾಗಿ ವಾಹನ ಸವಾರರಿಗೆ ಸಂಚಾರ ಕಷ್ಟಸಾಧ್ಯವಾಗಿದೆ. ಬಿರುಕು ಬಿಟ್ಟ ರಸ್ತೆಗಳಲ್ಲಿ ಸಿಮೆಂಟ್‌ ಸುರಿದು ತೇಪೆ ಹಚ್ಚುವ ಕೆಲಸ ನಡೆದಿದೆ, ನಿಜ. ಹಾಗಾದರೆ ಈ ಕಾಮಗಾರಿ ಎಷ್ಟರ ಮಟ್ಟಿಗೆ ಸರಿಯಾಗಿದೆ? ಎಂಬುದು ಸವಾರರ ಪ್ರಶ್ನೆಯಾಗಿದೆ.

ಜಿಲ್ಲಾ ಪಂಚಾಯಿತಿಯ ಸಭೆಯಲ್ಲಿ ಈ ಕಾಮಗಾರಿಯ ಬಗ್ಗೆ ಕೆಪಿಸಿಸಿ ಕಾಯರ್ಯಾಧ್ಯಕ್ಷ ಹಾಗೂ ಭಾಲ್ಕಿ ಕ್ಷೇತ್ರದ ಶಾಸಕ ಈಶ್ವರ್‌ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದರು. ಅನೇಕ ಅಪಘಾತಗಳು ಸಂಭವಿಸಿದೆ. ಅಲ್ಲದೇ ನಾಲ್ಕೈದು ಜನ ವಾಹನ ಸವಾರರು ಸಾವನಪ್ಪಿರುವ ಘಟನೆ ನಡೆದಿದೆ ಎಂದು ಆರೋಪಿಸಿ ಕೂಡಲೇ ಗುತ್ತಿಗೆದಾರನ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಬೇಕೆಂದು ಆಗ್ರಹಿಸಿದ್ದರು.

ಇಷ್ಟೆಲ್ಲಾ ನಡೆದರೂ ಸಂಬಂಧಪಟ್ಟ ಅಧಿಕಾರಿಗಳಾಗಲಿ, ಗುತ್ತಿಗೆದಾರರಾಗಲಿ ಈ ಬಗ್ಗೆ ಗಮನಹರಿಸಲಿಲ್ಲ. ಇನ್ನಾದರೂ ಈ ರಸ್ತೆ ಕಾಮಗಾರಿಯ ಬಗ್ಗೆ ಅಧಿಕಾರಿಗಳು ಕಾಳಜಿವಹಿಸಲಿ, ವ್ಯಯಿಸುವ ಹಣವನ್ನು ಸರಿಯಾದ ರೀತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸೊಲಿ ಎಂಬುದು ವಿಜಯಟೈಮ್ಸ್‌ನ ಆಶಯವಾಗಿದೆ.

ಭಾಲ್ಕಿಯಿಂದ ಸಿಟಿಜನ್‌ ಜರ್ನಲಿಸ್ಟ್‌ ಪವನ್‌ ಸಾಳಂಕೆ, ವಿಜಯಟೈಮ್ಸ್‌

Exit mobile version