ರಸ್ತೆಯೋ ಕೆಸರು ಗದ್ದೆಯೋ? ಇಲ್ಲಿ ಜನಪ್ರತಿನಿಧಿಗಳು ಸತ್ತೇ ಹೋಗಿದ್ದಾರಾ? ಪಂಚಾಯತ್‌ ಅಧಿಕಾರಿಗಳಿಗೆ ಕಣ್ಣೇ ಇಲ್ವಾ?

ರಸ್ತೆಯೋ ಕೆಸರು ಗದ್ದೆಯೋ? ಇಲ್ಲಿ ಜನಪ್ರತಿನಿಧಿಗಳು ಸತ್ತೇ ಹೋಗಿದ್ದಾರಾ?   Road or sludge?

ಇದು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಹೆಗ್ಗಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಬಾರೆ ರಸ್ತೆ… ಇದು ರಸ್ತೆಯೋ ಅಥವಾ ಕೆಸರು ಗದ್ದೆಯೋ ಅನ್ನೋ ಅನುಮಾನ ಈ ರಸ್ತೆಯನ್ನು ನೋಡಿದವರಿಗೆ ಮೂಡುತ್ತೆ. ರಸ್ತೆ ತುಂಬಾ ಇರುವ ಹೊಂಡ ಗುಂಡಿಗಳ ಮಧ್ಯೆ ರಸ್ತೆಯೇ ಕಾಣುವುದಿಲ್ಲ.

ಇನ್ನು ಇಲ್ಲಿ ಮಳೆಗಾಲ ಬಂದರೆ ಸಾಕು ಈ ರಸ್ತೆ ಕೆಸರು ಗದ್ದೆಯಂತಾಗುತ್ತೆ. ಈ ಸಂದರ್ಭದಲ್ಲಿ ಜನ ಈ ರಸ್ತೆಯಲ್ಲಿ ಕಷ್ಟಪಟ್ಟು, ಜೀವವನ್ನು ಕೈಯಲ್ಲಿ ಇಟ್ಟುಕೊಂಡು ಓಡಾಡಬೇಕು.

ಈ ರಸ್ತೆ ಹೆಗ್ಗಡಿಹಳ್ಳಿ ಮತ್ತು ಕೆಂಬಾರೆ ನಡುವೆ ಸಂಪರ್ಕ ಕಲ್ಪಿಸುತ್ತದೆ. ಅಲ್ಲದೇ ರೈತರು ತಮ್ಮ ಹೊಲ ಗದ್ದೆಗಳಿಗೆ ಹೋಗಲು ಹಾಗೂ ತಾವು ಬೆಳೆದ ಧಾನ್ಯಗಳನ್ನು ಸಾಗಿಸಲು ಇದೇ ರಸ್ತೆಯನ್ನು ಬಳಸಬೆಕಾಗಿದೆ.

ಈ ರಸ್ತೆಯಲ್ಲಿ ಸಾಮಾನ್ಯವಾಗಿ ಸಂಚರಿಸಲು ಕಷ್ಟ ಪಡುತ್ತಿರುವ ರೈತರು, ತಾವು ಬೆಳೆದ ಧಾನ್ಯಗಳನ್ನು ಸಾಗಿಸಲು ಹರಸಾಹಸ ಪಡುತ್ತಿದ್ದಾರೆ. ಆದರೆ ಇದ್ಯಾವುದೂ ಕೂಡ ಸಂಬಂಧಪಟ್ಟ ಅಧಿಕಾರಿಗಳಿಗಾಲಿ, ಪಂಚಾಯತ್‌ ಸದಸ್ಯರಿಗಾಗಲೀ, ಕಾಣದೇ ಇರುವುದು ವಿಪರ್ಯಾಸವೇ ಸರಿ.

ಈ ರಸ್ತೆಯಲ್ಲಿ ಕೇವಲ ರೈತರು ಮಾತ್ರವಲ್ಲ ಅನೇಕ ಶಾಲಾ ಕಾಲೇಜು ಮಕ್ಕಳು ಈ ಮಾರ್ಗವಾಗಿಯೇ ಸಂಚರಿಸಬೇಕು. ಆದರೆ ಕೊಚ್ಚೆಯಂತಾದ ಈ ಮಾರ್ಗದಲ್ಲಿ ಓಡಾಡುವುದು ಮಕ್ಕಳಿಗೆ ದು:ಸ್ವಪ್ನದಂತಾಗಿದೆ.

ಇಲ್ಲಿನ ಜನರು ಅನೇಕ ವರ್ಷಗಳಿಂದ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜತೆಗೆ ಈ ಸಮಸ್ಯೆಯ ಕುರಿತಾಗಿ ಅನೇಕ ಬಾರಿ ಮನವಿ ಮಾಡಿಕೊಂಡರೂ ಯಾವುದೇ ರೀತಿಯಲ್ಲಿ ಸ್ಪಂದಿಸಲಿಲ್ಲ. ಇನ್ನೆಷ್ಟು ವರ್ಷ ನಾವು ಈ ರೀತಿಯ ರಸ್ತೆಯಲ್ಲಿ ಸಂಚರಿಸಬೇಕು ಎನ್ನುವುದು ಗ್ರಾಮಸ್ಥರ ಪ್ರಶ್ನೆಯಾಗಿದೆ.

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಗ್ರಾಮಸ್ಥರ ಹಾಗೂ ರೈತರ ಸಮಸ್ಯೆಗಳಿಗೆ ಸ್ಪಂದಿಸಲಿ. ಜನಪ್ರತಿನಿಧಿಗಳು ಈಗಲಾದ್ರೂ ಕಣ್ತೆರೆದು ಈ ರಸ್ತೆ ದುರಸ್ಥಿಗೆ ಮನಸು ಮಾಡಲಿ ಎಂಬುದು ವಿಜಯಟೈಮ್ಸ್‌ನ ಆಶಯವಾಗಿದೆ.

ಹಾಸನದಿಂದ ಲೋಕೇಶ್‌ ಎನ್‌. ಹೆಗ್ಗಡಿಹಳ್ಳಿ,  ವಿಜಯಟೈಮ್ಸ್‌

Exit mobile version