ಶಿಕ್ಷಣಕ್ಕೆ ರಸ್ತೆ ಅಡ್ಡಿ! ಬರೀ ಹೊಂಡಗಳಿಂದಲೇ ತುಂಬಿದೆ ಚಿಕ್ಕಬಿದರೆಯ ರಸ್ತೆ. ದಶಕಗಳಿಂದ ರಿಪೇರಿ ಕಾಣದ ರಸ್ತೆಯಲ್ಲಿ ಬರೀ ಹಳ್ಳಕೊಳ್ಳಗಳೇ ತುಂಬಿವೆ

ಶಿಕ್ಷಣಕ್ಕೆ ರಸ್ತೆ ಅಡ್ಡಿ! | Education halted because of bad road.

ಇವರೆಲ್ಲಾ ರಸ್ತೆಗಿಳಿದು ಈ ರೀತಿ ಪ್ರತಿಭಟನೆ ಮಾಡಲು ಬಲವಾದ ಕಾರಣ ಇದೆ. ರಸ್ತೆ ತಡೆ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿರುವುದರ ಹಿಂದೆ ಬಲವಾದ ಉದ್ದೇಶ ಇದೆ. ಅದೇನು ಗೊತ್ತಾ? ಕೆಸರು ಗದ್ದೆಯಂತಾಗಿರೋ ರಸ್ತೆ.

ಯಸ್‌, ಇವರೆಲ್ಲಾ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಚಿಕ್ಕ ಬಿದರೆ ಗ್ರಾಮದ ಜನ. ಇವರು ಕಳೆದು ಹತ್ತು ವರ್ಷಗಳಿಂದ ಈ ಹಾಳಾಗಿರೋ ರಸ್ತೆಯಲ್ಲೇ ಓಡಾಡುತ್ತಿದ್ದಾರೆ. ಇದರಿಂದ ಇವರು ಪಡಬಾರದ ಕಷ್ಟ ಅನುಭವಿಸುತ್ತಿದ್ದಾರೆ.

ಬರೀ ಹೊಂಡ ಗುಂಡಿಗಳೇ ತುಂಬಿರುವ ಈ ರಸ್ತೆಯಿಂದ ಮಕ್ಕಳ ಶಿಕ್ಷಣವೇ ನಿಂತು ಹೋಗಿದೆ. ಯಾವ ಶಿಕ್ಷಕರೂ ಈ ಊರಿಗೆ ಬಂದು ಮಕ್ಕಳಿಗೆ ಶಿಕ್ಷಣ ಕೊಡಲು ಸಿದ್ಧರಿಲ್ಲ. ಕಾರಣ ಹಾಳಾಗಿರೋ ರಸ್ತೆ.

ಈ ಕೊಚ್ಚೆ ಕೊಂಪೆಯಂತಿರುವ ರಸ್ತೆಯಿಂದಾಗಿ ಕಾಲೇಜಿಗೆ ಹೋಗೋ ಮಕ್ಕಳ ಭವಿಷ್ಯವೇ ಹಾಳಾಗ್ತಿದೆ. ಸರಿಯಾದ ಸಮಯಕ್ಕೆ ಬಸ್‌ ಬರಲ್ಲ, ಬಸ್‌ ಬಂದ್ರೂ ಸರಿಯಾದ ಸಮಯಕ್ಕೆ ಸಿಟಿ ತಲುಪಲ್ಲ. ಹಾಗಾಗಿ ಕಾಲೇಜು ಹುಡುಗರು ಸರಿಯಾದ ಸಮಯಕ್ಕೆ ಕಾಲೇಜಿಗೆ ತಲುಪಲು ಸಾಧ್ಯವಾಗುತ್ತಿಲ್ಲ ಅನ್ನೋದು ಸ್ಥಳೀಯರ ಗೋಳು.

ಚಿಕ್ಕಬಿದರೆಯ ರಸ್ತೆ ಅಂದ್ರೆ ಎಲ್ಲರೂ ಭಯ ಬೀಳ್ತಾರೆ. ಇಲ್ಲಿ ಗರ್ಭಿಣಿ ಹೆಂಗಸರು ಓಡಾಡಿದ್ರೆ ರಸ್ತೆಯಲ್ಲಿ ಹೆರಿಗೆ ಆಗೋದು ಗ್ಯಾರಂಟಿ. ಅಷ್ಟೂ ಹೊಂಡಗಳಿಂದ ಕೂಡಿದೆ.

ಈ ರಸ್ತೆ ಅವ್ಯವಸ್ಥೆಯಿಂದ ಬಡವರ ಪಾಡು ದೇವರಿಗೇ ಪ್ರೀತಿ. ಕೆಸರು ಗದ್ದೆಯಂತಿರುವ ರಸ್ತೆಯಲ್ಲಿ ನಡೆದೇ ಓಡಾಡುವುದು ಬಡವರಿಗೆ ಕಷ್ಟಸಾಧ್ಯವಾಗುತ್ತಿದೆ. ಕೊಚ್ಚೆಯಿಂದ ಜಾರಿ ಅದೆಷ್ಟೋ ಮಂದಿ ಕೈಕಾಲು ಮುರಿದುಕೊಂಡಿದ್ದಾರಂತೆ.

ಜನ ಈ ರಸ್ತೆಯಿಂದ ಇಷ್ಟೊಂದು ಸಮಸ್ಯೆ ಎದುರಿಸುತ್ತಿದ್ರೂ ಜನಪ್ರತಿನಿಧಿಗಳಿಗೆ ಮಾತ್ರ ಇದೆಲ್ಲಾ ಕಾಣಿಸುತ್ತಲೇ ಇಲ್ಲ. ಎಂಎಲ್‌ಎ, ಎಂಪಿಗೆ ಎಷ್ಟು ಬಾರಿ ದೂರು ಕೊಟ್ರೂ ಬರೀ ಆಶ್ವಾನೆಗಳಷ್ಟೇ ಸಿಕ್ಕಿದೆ. ರಸ್ತೆ ಮಾತ್ರ ರಿಪೇರಿಯಾಗಿಲ್ಲ ಅನ್ನೋದು ಗ್ರಾಮಸ್ಥರ ಆಕ್ರೋಶ.

ಪಂಚಾಯತ್‌ ಅಧಿಕಾರಿಗಳಿಂದ ಹಿಡಿದು ಎಂಪಿ ವರೆಗೆ ದೂರು ಕೊಟ್ರೂ ಸ್ಪಂದವೆ ಸಿಗದ ಕಾರಣ ಜನರೇ ರಸ್ತೆಗಿಳಿದು ಹೋರಾಟ ಪ್ರಾರಂಭಿಸಿದ್ದಾರೆ. ರಸ್ತೆ ತಡೆ ಮಾಡಿ ಅಧಿಕಾರಿಗಳಿಗೆ ಬಿಸಿಮುಟ್ಟಿಸಿದ್ರು.

ಜನರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ಮಾಡಿದ ಕಾರಣ ಕೆಲ ಕಾಲ ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಯಿತು. ತಕ್ಷಣ ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್‌ ರಾಮಚಂದ್ರಪ್ಪ ಹಾಗೂ ಪಿಡಬ್ಲ್ಯುಡಿ ಇಂಜಿನಿಯರ್‌ ಚಂದ್ರಕಾಂತ್‌ ಆದಷ್ಟು ಬೇಗ ರಸ್ತೆ ದುರಸ್ಥಿತಿ ಕಾಮಗಾರಿ ಪ್ರಾರಂಭಿಸುವ ಭರವಸೆ ನೀಡಿದ್ರು.

ಈ ಬಾರಿ ಅಧಿಕಾರಿಗಳ ಭರವಸೆ ಬರೀ ಭರವಸೆಯಾಗಿ ಮಾತ್ರ ಉಳಿಯದೆ ಜನರಿಗೆ ಆದಷ್ಟು ಬೇಗ ರಸ್ತೆ ರಿಪೇರಿ ಮಾಡಿ ಜನರನ್ನು ನರಕಯಾತನೆಯಿಂದ ಮುಕ್ತಗೊಳಿಸಲಿ ಅನ್ನೋದು ವಿಜಯಟೈಮ್ಸ್‌ ಆಶಯ.

ಚಿಕ್ಕಬಿದರೆಯಿಂದ ನಾಗರಾಜ್‌ ಸಿಟಿಜನ್ ಜರ್ನಲಿಸ್ಟ್‌, ವಿಜಯಟೈಮ್ಸ್‌

Exit mobile version