ಸಾರಿಗೆ ಸಂಸ್ಥೆ ನೌಕರರ ಹೋರಾಟಕ್ಕೆ ರಾಕಿ ಭಾಯ್ ಸಾಥ್

ಬೆಂಗಳೂರು, ಏ. 15: ರಾಜ್ಯದಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲ ಸೂಚಿಸಿರುವ ರಾಕಿಂಗ್ ಸ್ಟಾರ್ ಯಶ್, ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರೊಂದಿಗೆ ಮಾತನಾಡಿರುವ ಬಗ್ಗೆ ಭರವಸೆ ನೀಡಿದ್ದಾರೆ.

ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರು, ತಮ್ಮ ಹೋರಾಟಕ್ಕೆ ಬೆಂಬಲ ನೀಡುವಂತೆ ನಟ ಯಶ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಾರಿಗೆ ನೌಕರರು ತಮಗೆ ಬರೆದಿದ್ದ ಪತ್ರಕ್ಕೆ ನಟ ಯಶ್‌ ಪತ್ರದ ಮೂಲಕವೇ ಪ್ರತಿಕ್ರಿಯಿಸಿ ತಾವು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರೊಂದಿಗೆ ಸಾರಿಗೆ ನೌಕರರ ಸಮಸ್ಯೆಗಳ ಬಗ್ಗೆ ಮಾತನಾಡಿರುವುದಾಗಿ ತಿಳಿಸಿದ್ದಾರೆ.

ಅಲ್ಲದೇ, ನಾನು ನಿಮ್ಮ ಸಂಸ್ಥೆಯ ಪ್ರಾಮಾಣಿಕ ನೌಕರನ ಮಗ. ನಮ್ಮಪ್ಪ ಎಷ್ಟೋ ದಿನ ತಿಂಡಿ ತಿನ್ನದೆ ಗಡಿಬಿಡಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ ದಿನಗಳು ಈಗಲೂ ನೆನಪಿವೆ. ನಿಮ್ಮ ಹೋರಾಟ, ಅಳಲು ನನ್ನನ್ನು ಬಹುವಾಗಿ ಕಾಡುತ್ತಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ದೊಡ್ಡ ಸಮಸ್ಯೆಯೊಂದರ ಪರಿಹಾರಕ್ಕೆ ಚಿಕ್ಕ ಪ್ರಯತ್ನ ಎಂಬಂತೆ ನಾನು ಈ ಬಗ್ಗೆ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿಯವರೊಂದಿಗೆ ಮಾತನಾಡಿದ್ದೇನೆ. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ವೇತನ ತಾರತಮ್ಯ ಬಗೆಹರಿಸಲು ಕೇಳಿದಾಗ ಅವರು ನನ್ನ ಮಾತನ್ನು ತಪ್ಪದೆ ಈಡೇರಿಸುವುದಾಗಿ ಭರವಸೆ ನೀಡಿದರು. ವಿರಸ ಬಿಟ್ಟು ಸಾಮರಸ್ಯದೊಂದಿಗೆ ಮುನ್ನಡೆಯೋಣ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ತಮ್ಮ ಹೋರಾಟಕ್ಕೆ ಬೆಂಬಲ ನೀಡುವಂತೆ ನಟ ಯಶ್ ಅವರಲ್ಲಿ ಮನವಿ ಮಾಡಿದ್ದ ಸಾರಿಗೆ ನೌಕರರು, ಸ್ವತಃ ಬಸ್ ಚಾಲಕನ ಪುತ್ರನಾದ ಯಶ್ ಗೆ ಚಾಲಕ, ನಿರ್ವಾಹಕರ ಸಂಕಷ್ಟದ ಅರಿವಿರುತ್ತದೆ. ಹೀಗಾಗಿ ಅವರು ನಮ್ಮ ಪರ ದನಿಯೆತ್ತಬೇಕುʼ ಎಂದು ಆಗ್ರಹಿಸಿದ್ದಾರೆ. ಆದರೆ ಈ ಪತ್ರದಲ್ಲಿ ಯಾವುದೇ ಸಂಘಟನೆಯ ಅಧಿಕೃತ ಮುದ್ರೆ, ಸಹಿ, ದಿನಾಂಕ ಇರಲಿಲ್ಲ. ಆದರೆ, ಯಶ್ ಅವರ ತಂದೆ ಸಹ ಬಿಎಂಟಿಸಿ ನಿವೃತ್ತ ನೌಕರರಾಗಿರುವ ಕಾರಣ ಈ ಪತ್ರ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದಿತ್ತು.

Exit mobile version