ರೋಹಿಣಿ ಸಿಂಧೂರಿ ಜನಪ್ರತಿನಿಧಿಗಳ ಮೇಲೆ ಸವಾರಿ ಮಾಡುತ್ತಿದ್ದಾರೆ: ಸಾ.ರಾ. ಮಹೇಶ್

ಮೈಸೂರು, ಜ. 13: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಶಾಸಕ ಸಾ.ರಾ.ಮಹೇಶ್ ನಡುವಿನ ವಾಕ್ ಸಮರ ಮುಂದುವರಿದಿದ್ದು, ಜಿಲ್ಲಾಧಿಕಾರಿ ವಿರುದ್ಧ ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿರುವ ಸಾ.ರಾ.ಮಹೇಶ್, ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವರ್ತನೆ ಅಕ್ಷಮ್ಯ ಮತ್ತು ಖಂಡನೀಯ ಎಂದು ಟೀಕಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವರ್ತನೆ ಅಕ್ಷಮ್ಯ ಮತ್ತು ಖಂಡನೀಯ. ತಾವೊಬ್ಬ ಅತ್ಯಂತ ಪ್ರಾಮಾಣಿಕ ಅಧಿಕಾರಿ ಎಂದು ಬಿಂಬಿಸಿಕೊಳ್ಳುತ್ತಿರುವ ಇವರು ಜನಪ್ರತಿನಿಧಿಗಳ ಮೇಲೆ ಸವಾರಿ ಮಾಡಲು ಹೊರಟಿದ್ದಾರೆ.

ಹಾಸನದಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ ತಮ್ಮ ದಿಢೀರ್ ವರ್ಗಾವಣೆಗೆ ನ್ಯಾಯ ಕೇಳಲು KAT ಗೆ ಹೋಗಿದ್ದ ಇದೇ ಅಧಿಕಾರಿ ಮೈಸೂರಿನಲ್ಲಿ ಉಲ್ಟಾ ಹೊಡೆದ ಕಥೆ ಇಡೀ ನಾಡಿಗೆ ಗೊತ್ತಿದೆ. ಇಂಥವರಿಂದ ನಾನು ಪಾಠ ಕಲಿಯಬೇಕಿಲ್ಲ. ತನಗೊಂದು ನ್ಯಾಯ, ಪರರಿಗೊಂದು ನ್ಯಾಯ’ ಎನ್ನುವ ಇಂತಹ ಅಧಿಕಾರಿ, ಸಾಂವಿಧಾನಿಕ ಸಂಸ್ಥೆಗಳು/ ಸಮಿತಿಗಳಿಗೆ ಯಾವ ರೀತಿ ಅಧಿಕಾರಿಗಳು ಶಿಷ್ಟಾಚಾರ ಪಾಲಿಸಬೇಕೆಂದು ಸರ್ಕಾರ ಹೊರಡಿಸಿರುವ ಸುತ್ತೋಲೆಗಳನ್ನು ಓದಿ ಮೊದಲು ಅರ್ಥಮಾಡಿಕೊಳ್ಳಲಿ.

“ಮಾತಿನಲ್ಲಿ ಬ್ರಹ್ಮ ನೀತಿಯಲ್ಲಿ ಕ್ರೋಧಿ ಈ ಲೋಕದ ಭುಂಜಕರು ನಾ ಹೆಚ್ಚು ತಾ ಹೆಚ್ಚು ಎಂದು ನಡೆದಾಡುವರಯ್ಯ
ನಾನು ನೀನೆಂಬ ಉಭಯವಳಿದು
ತಾನು ತಾನಾದುದ ನಾನಾರನೂ ಕಾಣೆನಯ್ಯ ಝೇಂಕಾರ ನಿಜಲಿಂಗಪ್ರಭುವೆ
          – ಜಕ್ಕಣಯ್ಯ” ಎಂದು ಕಿಡಿಕಾರಿದ್ದಾರೆ.

Exit mobile version