50ಕ್ಕೂ ಹೆಚ್ಚು ಮರಿಗಳಿಗೆ ಜನ್ಮ ನೀಡಿ, ಪ್ರಾಣಬಿಟ್ಟ ಕೊಳಕು ಮಂಡಲ!

ಚಿತ್ರದುರ್ಗ(Chitradurga) ಜಿಲ್ಲೆಯ ಭರಮಸಾಗರ ಹೋಬಳಿಯ ಹಂಪನೂರು ಗ್ರಾಮದ ಜಮೀನಿನೊಂದರಲ್ಲಿ ಉಳುಮೆ ಮಾಡುತ್ತಿದ್ದ, ಟ್ರಾಕ್ಟರ್ ಒಂದರ ನೇಗಿಲೆಗೆ ಸಿಲುಕಿ ಕೊಳಕುಮಂಡಲ(Russelle Viper) ಹಾವೊಂದು ತೀವ್ರವಾಗಿ ಗಾಯಗೊಂಡಿತ್ತು.

ನಂತರ ಜಮೀನಿನ ಮಾಲೀಕರು ಹಾಗೂ ಟ್ರಾಕ್ಟರ್ ಚಾಲಕ ಹತ್ತಿರ ಹೋಗಿ ನೋಡಿದಾಗ ಒದ್ದಾಡುತ್ತಿದ್ದ ತುಂಬು ಗರ್ಭಿಣಿ ಹಾವು, ಸಾವು ಬದುಕಿನ ನಡುವೆ ಒಂದೊಂದೆ ಹಾವಿಗೆ ಜನ್ಮ ನೀಡುತ್ತಿತ್ತು. ಒಟ್ಟು 50 ಕ್ಕೂ ಅಧಿಕ ಮರಿಗಳಿಗೆ ಜನ್ಮವಿತ್ತ, ಮಹಾತಾಯಿ ಕೊಳಕು ಮಂಡಲ ಅಂತಿಮವಾಗಿ ಮರಿಗಳಿಗೆ ಜನ್ಮ ನೀಡಿದ ತೃಪ್ತಿಯೊಂದಿಗೆ ಪ್ರಾಣ ಬಿಟ್ಟಿತು. ಸಾಮಾನ್ಯವಾಗಿ ಮರಿಗಳಿಗೆ ತಾಯಿಯ ಪಾಲನೆಪೋಷಣೆಯ ಅವಶ್ಯಕತೆ ಇಲ್ಲದಿರುವ ಕಾರಣದಿಂದ ಈ ಹಾವಿನ ಮರಿಗಳು ಬದುಕುಳಿಯುತ್ತವೆ.


ಕೊಳಕು ಮಂಡಲ(Russell Viper) ಹಾವು(Snake) ಭಾರತದ Big Four Venomous Snake ಗಳಲ್ಲಿ ಒಂದಾಗಿದೆ. ಭಾರತದಲ್ಲಿ ಹಾವು ಕಡಿತದಿಂದ ಮೃತಪಡುವ ಜನರಲ್ಲಿ ಹೆಚ್ಚಿನ ಜನ ಈ ಕೊಳಕು ಮಂಡಲದ ಜೊತೆಗೆ ನಾಗರಹಾವು, ಕಟ್ಟಾವು ಹಾಗೂ ಗರಸಗ ಮಂಡಲ ಎಂಬ ನಾಲ್ಕು ಹಾವುಗಳ ಕಡಿತದಿಂದ ಮಾತ್ರ ಸಾವನ್ನಪ್ಪುತ್ತಾರೆ. ಹಾಗಾಗಿ ಈ ನಾಲ್ಕು ಹಾವುಗಳನ್ನು Big four venomous snakes of India ಎಂದು ಪಟ್ಟಿ ಮಾಡಲಾಗಿದೆ.

ವಿಷರಹಿತವಿರಲಿ ಅಥವಾ ವಿಷಕಾರಿ ಇರಲಿ, ಹಾವುಗಳು ಪರಿಸರ ಸಮತೋಲನದಲ್ಲಿ ಇತರ ಜೀವಿಗಳಂತೆ ಮಹತ್ವದ ಪಾತ್ರ ವಹಿಸುತ್ತವೆ. ಅಲ್ಲದೇ ಯಾವುದೇ ಹಾವುಗಳು ಗುರಿ‌ ಮಾಡಿಕೊಂಡು (Target) ಬಂದು ಕಚ್ಚುವುದಿಲ್ಲ. ಹೆಚ್ಚಿನ ಸಂಧರ್ಭದಲ್ಲಿ ಹಾವುಗಳ ಕಡಿತವಾದಾಗ ನಮ್ಮ ನಿರ್ಲಕ್ಷತೆ ಇರುತ್ತದೆ. ಅಲ್ಲದೆ ಯಾವುದೇ ವಿಷಕಾರಿ ಹಾವು ಕಚ್ಚಿದಾಗ ಸೂಕ್ತ ಚಿಕಿತ್ಸೆ ಕೊಡಿಸಿದರೆ ಸಂತ್ರಸ್ತ ಬದುಕುವ ಸಾಧ್ಯತೆ ಹೆಚ್ಚಾಗಿರುತ್ತದೆ‌.

Exit mobile version