ತಂದೆ ಸತ್ತರೆ, ಮಗನಿಗೆ ಶೇ.45, ಸರ್ಕಾರಕ್ಕೆ ಶೇ.55ರಷ್ಟು ಆಸ್ತಿ: ರಾಗಾ ಆಪ್ತನ ಹೊಸ ತೆರಿಗೆ ಪದ್ದತಿಗೆ ಭಾರೀ ವಿರೋಧ!

NewDelhi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಆಪ್ತ ಹಾಗೂ ಭಾರತೀಯ ಸಾಗರೋತ್ತರ ಕಾಂಗ್ರೆಸ್ನ ಅಧ್ಯಕ್ಷರಾದ ಸ್ಯಾಮ್ ಪಿತ್ರೋಡಾ (Sam Pitroda) ಅವರು ಉತ್ತರಾಧಿಕಾರ ತೆರಿಗೆಯ ಕುರಿತು ನೀಡಿರುವ ಹೇಳಿಕೆ ಇದೀಗ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ.

ಅಮೇರಿಕಾದಲ್ಲಿ (America) ಇರುವಂತೆ ಭಾರತದಲ್ಲಿಯೂ ಉತ್ತರಾಧಿಕಾರ ತೆರಿಗೆ ಪದ್ದತಿಯನ್ನು ಜಾರಿಗೆ ತರಬೇಕು. ಅದರ ಪ್ರಕಾರ, ಒರ್ವ ವ್ಯಕ್ತಿ ಸಾವನ್ನಪ್ಪಿದರೆ ಅವನ ಒಟ್ಟು ಆಸ್ತಿಯಲ್ಲಿ ಶೇಕಡಾ 45ರಷ್ಟು ಆತನ ಮಕ್ಕಳಿಗೆ, ಇನ್ನೂಲಿದ ಶೇಕಡಾ 55ರಷ್ಟು ಆಸ್ತಿ ಸರ್ಕಾರ ವಶಪಡಿಸಿಕೊಳ್ಳಬೇಕೆಂದು ಹೇಳಿದ್ದರು. ಸ್ಯಾಮ್ ಪಿತ್ರೋಡಾ ನೀಡಿದ ಈ ಹೇಳಿಕೆಗೆ ಎಲ್ಲೆಡೆಯಿಂದ ವಿರೋಧ ವ್ಯಕ್ತವಾದ ನಂತರ ಇದೀಗ ತಮ್ಮ ಹೇಳಿಕೆಗೆ ಸ್ಪಷ್ಟೀಕರಣ ನೀಡಿರುವ ಅವರು, ಪ್ರಮುಖ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ತಮ್ಮ ಹೇಳಿಕೆಗಳನ್ನು ತಿರುಚಲಾಗಿದೆ.

ಕಾಂಗ್ರೆಸ್ ಪ್ರಣಾಳಿಕೆಯ (Congress Manifesto) ಬಗ್ಗೆ ಪ್ರಧಾನಿ ಹರಡುತ್ತಿರುವ ಸುಳ್ಳುಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸಲು ನಾನು ಒಬ್ಬ ವ್ಯಕ್ತಿಯಾಗಿ ಅಮೇರಿಕಾದಲ್ಲಿ ಉತ್ತರಾಧಿಕಾರ ತೆರಿಗೆಯ ಕುರಿತು ಹೇಳಿದ್ದನ್ನು ಗೋಧಿ ಮಾಧ್ಯಮಗಳು ತಿರುಚಿರುವುದು ದುರದೃಷ್ಟಕರ ಎಂದು ಸ್ಯಾಮ್ ಪಿತ್ರೋಡಾ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇನ್ನು ಸಂಪತ್ತಿನ ಮರುಹಂಚಿಕೆಯ ಕುರಿತಾದ ಅವರ ಹೇಳಿಕೆಗಳ ಬಗ್ಗೆ ಭಾರತೀಯ ಜನತಾ ಪಕ್ಷದ ನಾಯಕರು ಅವರನ್ನು ತರಾಟೆಗೆ ತೆಗೆದುಕೊಂಡ ನಂತರ ಸ್ಯಾಮ್ ಪಿತ್ರೋಡಾ ಅವರು ಸ್ಪಷ್ಟನೆ ನೀಡಿದ್ದಾರೆ. ಅಮೆರಿಕದಲ್ಲಿ, ಪಿತ್ರಾರ್ಜಿತ ತೆರಿಗೆ ಇದೆ. ಒಬ್ಬನು 100 ಮಿಲಿಯನ್ USD ಮೌಲ್ಯದ ಸಂಪತ್ತನ್ನು ಹೊಂದಿದ್ದರೆ ಮತ್ತು ಅವನು ಸತ್ತಾಗ ಅವನು ಬಹುಶಃ 45 ಪ್ರತಿಶತವನ್ನು ತನ್ನ ಮಕ್ಕಳಿಗೆ ವರ್ಗಾಯಿಸಬಹುದು, 55 ಪ್ರತಿಶತವನ್ನು ಸರ್ಕಾರ ನೀಡಬೇಕು. ಇದು ಆಸಕ್ತಿದಾಯಕ ಕಾನೂನು. ನೀವು ನಿಮ್ಮ ಸಂಪತ್ತನ್ನು ಸಾರ್ವಜನಿಕರಿಗೆ ಬಿಡಬೇಕು, ಎಲ್ಲವನ್ನೂ ಅಲ್ಲ, ಅದರಲ್ಲಿ ಅರ್ಧದಷ್ಟು, ಇದು ನನಗೆ ನ್ಯಾಯೋಚಿತವಾಗಿದೆ ಎಂದು ಸ್ಯಾಮ್ ಪಿತ್ರೋಡಾ ಉಲ್ಲೇಖಿಸಿದ್ದಾರೆ.

ಸ್ಯಾಮ್ ಪಿತ್ರೋಡಾ ಹೇಳಿಕೆಯ ನಂತರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, “ಕಾಂಗ್ರೆಸ್ ಪಕ್ಷದ ಅಪಾಯಕಾರಿ ಉದ್ದೇಶಗಳು ಮತ್ತೊಮ್ಮೆ ಮುನ್ನೆಲೆಗೆ ಬಂದಿವೆ. ಈಗ ಈ ಜನರು ತಮ್ಮ ಪೋಷಕರಿಂದ ಮಕ್ಕಳಿಗೆ ಉಯಿಲು ಮಾಡಿದ ಆಸ್ತಿಗಳ ಮೇಲೆ ಪಿತ್ರಾರ್ಜಿತ ತೆರಿಗೆಯನ್ನು ವಿಧಿಸುವುದಾಗಿ ಹೇಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಸಂಪತ್ತು ಮರುಹಂಚಿಕೆ ಕುರಿತು ಸ್ಯಾಮ್ ಪಿತ್ರೋಡಾ ಅವರ ಹೇಳಿಕೆಯಿಂದ ಕಾಂಗ್ರೆಸ್ ನಿಲುವಿನ ತುಷ್ಟೀಕರಣದ ರಾಜಕೀಯ ಇಂದು ಬಹಿರಂಗವಾಗಿದೆ. ಅವರು ಬಹುಸಂಖ್ಯಾತರ ಆಸ್ತಿಯನ್ನು ವಶಪಡಿಸಿಕೊಂಡು ಅಲ್ಪಸಂಖ್ಯಾತರಿಗೆ ಹಂಚುವ ಪಕ್ಷದ ಉದ್ದೇಶವನ್ನು ಹೊಂದಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ.

Exit mobile version