‘ಗ್ರೂಫಿ’ಗೆ 25ರ ಸಂಭ್ರಮ

ಬೆಂಗಳುರು ಸೆ 20 : ಸೆಲ್ಫೀ ಫೋಟೋದಿಂದ ಆಗಬಹುದಾದ ಅವಾಂತರಗಳ ಬಗ್ಗೆ ಉತ್ತಮ ಸಂದೇಶದೊಂದಿಗೆ ಬಂದ ಚಿತ್ರ ‘ಗ್ರೂಫಿ’. ವಾರಗಳ ಹಿಂದೆ  ಬಿಡುಗಡೆಯಾಗಿತ್ತು, ಡಿ.ರವಿ ಅರ್ಜುನ್  ಅವರ ನಿರ್ದೇಶನದ ಈ ಚಿತ್ರಕ್ಕೆ  ಬಿಡುಗಡೆಯಾದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಹ ವ್ಯಕ್ತವಾಗಿತ್ತು. ಆ ಚಿತ್ರವೀಗ 25 ದಿನಗಳನ್ನು ಯಶಸ್ವಿಯಾಗಿ ಪೂರೈಸಿ ಮುನ್ನಡೆದಿದೆ.  ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಈ ಬಗ್ಗೆ ಮಾಹಿತಿ ಹಂಚಿಕೊಂಡಿತು.

ನಿರ್ದೇಶಕ ರವಿ ಅರ್ಜುನ್ ಮಾತನಾಡುತ್ತ “ನಮ್ಮ ಸಿನಿಮಾಗೆ ಎಲ್ಲ ಕಡೆಯಿಂದಲೂ ಪಾಸಿಟಿವ್ ರೆಸ್ಪಾನ್ಸ್ ಬಂದಿದೆ, ಚಿತ್ರ ವೀಕ್ಷಿಸಿದ ಎಲ್ಲರೂ ಚೆನ್ನಾಗಿದೆ ಅಂತಲೇ ಹೇಳುತ್ತದ್ದಾರೆ, ಆದರೂ ಜನ ಚಿತ್ರಮಂದಿರಗಳತ್ತ ಮುಖ ಮಾಡುತ್ತಿಲ್ಲ, ತಂತ್ರಜ್ಞರು, ಸ್ನೇಹಿತರು ಒಳ್ಳೇ ಪ್ರಯತ್ನ ಮಾಡಿದ್ದೀರಿ ಅಂತ ಕಾಲ್‌ ಮಾಡಿ ಹೇಳುತ್ತಿದ್ದಾರೆ. ಜನರ ಪ್ರತಿಕ್ರಿಯೆ ಕಂಡು ನಮಗೂ ಖುಷಿಯಾಗಿದೆ. ನಮ್ಮ ಚಿತ್ರ ಬೆಂಗಳೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳ ಮಲ್ಟಿಪ್ಲೆಕ್ಸ್ ನಲ್ಲಿ ರಿಲೀಸಾಗಿತ್ತು, ಸದ್ಯ ಒರಾಯನ್ ಮಾಲ್‌ನಲ್ಲಿ 2 ಷೋ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಸಿಂಗಲ್ ಸ್ಕ್ರೀನ್ ಗಳಲ್ಲೂ ರಿಲೀಸ್ ಮಾಡುವ ಯೋಜನೆಯಿದೆ, ಥಿಯೇಟರ್ ಸಮಸ್ಯೆಯನ್ನು ನಾವು ಫಿಲ್ಮ್ ಚೇಂಬರ್ ಬಳಿ ಹೇಳಿಕೊಂಡಾಗ ಎನ್.ಎಂ.ಸುರೇಶ್ ಅವರು ನಮಗೆ ಸಹಕಾರ ನೀಡುವ ಭರವಸೆ ಕೊಟ್ಟಿದ್ದಾರೆ” ಎಂದು ಹೇಳಿದರು. 

 ಚಿತ್ರದ ನಿರ್ಮಾಪಕ ಕೆಜಿ ಸ್ವಾಮಿ ಮಾತನಾಡುತ್ತ  ನಮ್ಮ ಚಿತ್ರಕ್ಕೆ ಎಲ್ಲರೂ  ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ, ಮಾಧ್ಯಮದವರು ಚಿತ್ರಕ್ಕೆ ಪ್ರತಿ ಹಂತದಲ್ಲೂ ಉತ್ತಮ ಬರವಣೆಗೆಯ ಮೂಲಕ ಹೆಚ್ಚಿನ ಪ್ರಚಾರ  ನೀಡಿದ್ದಾರೆ, ನಾವು ಚಿತ್ರವನ್ನು ರಿಲೀಸ್ ಮಾಡಿದಾಗ 8 ಜಿಲ್ಲೆಗಳಲ್ಲಿ ಕೋವಿಡ್ ನಿರ್ಬಂಧ ಇತ್ತು. ಹಾಗಾಗಿ ಹೆಚ್ಚಿನ ಸೆಂಟರ್‌ಗಳಲ್ಲಿ ರಿಲೀಸ್ ಮಾಡಲು ಆಗಿದ್ದಿಲ್ಲ. ಈಗ ಎಲ್ಲರೂ ಕಾಲ್‌ಮಾಡಿ ನಮಗೆ ಕೊಡಿ ಎಂದು  ಕೇಳುತ್ತಿದ್ದಾರೆ. ಜನ ಧೈರ್ಯದಿಂದ ಥಿಯೇಟರ್‌ಗೆ ಬರಬೇಕಿದೆ ಎಂದು ಹೇಳಿದರು. ಚಿತ್ರತಂಡಕ್ಕೆ ಸಹಕಾರ ನೀಡಲು ಆಗಮಿಸಿದ್ದ ಎನ್‌ಎಂ ಸುರೇಶ್ ಮಾತನಾಡಿ ಈ ಸಿನಿಮಾ ಬಗ್ಗೆ ಒಳ್ಳೇ ರಿಪೋರ್ಟ್ ಇದೆ ಎಂದು ನಾನೂ ಕೇಳಿದ್ದೇನೆ. ಆದರೆ ಜನ ಬರುತ್ತಿಲ್ಲ ಎನ್ನುವುದು ಬೇಸರದ ವಿಚಾರ ಎಂದರು.

Exit mobile version