ಸದ್ಯದಲ್ಲೇ ಬೆಂಗಳೂರಿನ 2 ಚಿತ್ರಮಂದಿರಗಳು ಶಾಶ್ವತ ಬಂದ್

ಬೆಂಗಳೂರು ಅ 22 : ಮೆಜೆಸ್ಟಿಕ್‌ನ ಎರಡು ಪ್ರಮುಖ ಚಿತ್ರಮಂದಿರಗಳು ಶಾಶ್ವತವಾಗಿ ಬಂದ್ ಆಗಲಿವೆ. ಕನ್ನಡ ಚಿತ್ರರಂಗದ ಕೇಂದ್ರ ಸ್ಥಾನ ಬೆಂಗಳೂರಿನ ಗಾಂಧಿನಗರ ಎಂಬ ಕಾಲವೊಂದಿತ್ತು. ಈಗಲೂ ಸಹ ಚಿತ್ರರಂಗದ ಚರ್ಚೆ ಬಂದಾಗ ಗಾಂಧಿನಗರದ ಉಲ್ಲೇಖ ಆಗದೇ ಇರುವುದಿಲ್ಲ. ಕನ್ನಡ ಚಿತ್ರರಂಗಕ್ಕೆ ಪರ್ಯಾಯ ಪದವಾಗಿ ಗಾಂಧಿನಗರವನ್ನು ಬಳಸಲಾಗುತ್ತಿತ್ತು. ಆದರೆ ‘ಕನ್ನಡ ಸಿನಿಮಾ ಹಬ್’ ಆಗಿದ್ದ ಗಾಂಧಿನಗರ ನಿಧಾನಕ್ಕೆ ಸಿನಿಮಾಗಳಿಂದ ದೂರವಾಗುತ್ತಿದೆ.

ಗಾಂಧಿ ನಗರದ ಕಿರೀಟದಂತಿದ್ದ ಜನಪ್ರಿಯ ಚಿತ್ರಮಂದಿರಗಳು ಒಂದೊಂದಾಗಿ ಬಾಗಿಲು ಹಾಕುತ್ತಿವೆ. ಈಗಾಗಲೇ ಮೆಜೆಸ್ಟಿಕ್ ಸುತ್ತ-ಮುತ್ತ ಇದ್ದ ಕೆಲವು ಐಕಾನಿಕ್ ಚಿತ್ರಮಂದಿರಗಳು ಬಾಗಿಲು ಹಾಕಿದ್ದು ಮಾಲ್‌ಗಳಿಗೆ, ಹೈಟೆಕ್ ಆಸ್ಪತ್ರೆಗಳಿಗೆ ಜಾಗ ಮಾಡಿಕೊಟ್ಟಿವೆ. ಇದೀಗ ಇನ್ನೆರಡು ಪ್ರಸಿದ್ಧ ಚಿತ್ರಮಂದಿರಗಳು ಶಾಶ್ವತವಾಗಿ ಬಾಗಿಲು ಹಾಕುತ್ತಿವೆ.

ಮೆಜೆಸ್ಟಿಕ್‌ನಿಂದ ಕಾಲಳತೆ ದೂರದಲ್ಲಿರುವ ಸಂತೋಷ್ ಚಿತ್ರಮಂದಿರ ಹಾಗೂ ನರ್ತಕಿ ಚಿತ್ರಮಂದಿರಗಳು ಶಾಶ್ವತವಾಗಿ ಬಾಗಿಲು ಹಾಕುವುದು ಅಧಿಕೃತವಾಗಿದೆ.

ಸಂತೋಶ್, ನರ್ತಕಿ ಇದ್ದ ಜಾಗದಲ್ಲಿ ಆಸ್ಪತ್ರೆ ನಿರ್ಮಾಣವಾಗಲಿದೆಯೇ ಅಥವಾ ಮಾಲ್‌ ಎಂಬುದು ಅಧಿಕೃತ ಆಗಿಲ್ಲವಾದರೂ ಈ ಎರಡೂ ಚಿತ್ರಮಂದಿರಗಳು ಇನ್ನು ಮುಂದೆ ಕಾರ್ಯನಿರ್ವಹಿಸುವುದಿಲ್ಲ ಎಂಬುದು ಖಾತ್ರಿಯಾಗಿದೆ. ಈ ಬಗ್ಗೆ ಚಿತ್ರರಂಗದ ಪ್ರಮುಖರೇ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.ಮೆಜೆಸ್ಟಿಕ್‌ ಸುತ್ತ-ಮುತ್ತ ಇದ್ದ ಹಳೆಯ ಚಿತ್ರಗಳಾಗಿದ್ದ ‘ಕಪಾಲಿ’, ‘ಸಾಗರ್’, ‘ಸ್ಟೇಟ್ಸ್’, ‘ಸಪ್ನಾ’, ‘ತ್ರಿವೇಣಿ’ ಚಿತ್ರಮಂದಿರಗಳು ಈಗಾಗಲೇ ಬಾಗಿಲು ಹಾಕಿದ್ದಾಗಿದೆ. ಈ ಜಾಗಗಳಲ್ಲೆಲ್ಲ ಮಾಲ್‌ಗಳು, ಆಸ್ಪತ್ರೆ ಇನ್ನಿತರೆ ಕಮರ್ಷಿಯಲ್ ವ್ಯಾಪಾರ ಮಳಿಗೆಗಳು ಆರಂಭವಾಗಿವೆ. ಈಗ ಇದೇ ಸಾಲಿಗೆ ಸಂತೋಶ್ ಹಾಗೂ ನರ್ತಕಿ ಸೇರಿಕೊಂಡಿದೆ.

ಕೆಲವು ದಿನಗಳ ಹಿಂದೆಯಷ್ಟೆ ಸಂತೋಶ್ ಚಿತ್ರಮಂದಿರದಲ್ಲಿ ‘ನಿನ್ನ ಸನಿಹಕೆ’ ಸಿನಿಮಾ ಬಿಡುಗಡೆ ಮಾಡಲಾಗಿತ್ತು. ಆದರೆ ತಾಂತ್ರಿಕ ಕಾರಣ ನೀಡಿ ಚಿತ್ರ ಪ್ರದರ್ಶನ ರದ್ದು ಮಾಡಲಾಯ್ತು. ಆ ನಂತರ ಸಲಗ ಸಿನಿಮಾವನ್ನು ಸಂತೋಶ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ ಎನ್ನಲಾಯ್ತು ಆದರೆ ನಂತರ ಅದೂ ಬದಲಾಯ್ತು.

 ‘ಕೋಟಿಗೊಬ್ಬ 3’ ಸಿನಿಮಾ ನರ್ತಕಿ ಸಿನಿಮಾದಲ್ಲಿ ಬಿಡುಗಡೆ ಆಗುವುದಿತ್ತು ಆದರೆ ಚಿತ್ರಮಂದಿರ ಬಂದ್ ಆಗುವ ನಿರ್ಧಾರ ಹೊರಬಿದ್ದ ಕಾರಣ ನರ್ತಕಿ ಬದಲಿಗೆ ಭೂಮಿಕಾಗೆ ಬದಲಾಯಿಸಲಾಗಿದೆ. ಒಟ್ಟಿನಲ್ಲಿ ಬೆಂಗಳೂರಿನ ಐತಿಹಾಸಿಕ ಚಿತ್ರಮಂದಿರಗಳು ಕೆಲವೇ ತಿಂಗಳುಗಳ ಅಂತರದಲ್ಲಿ ಸಾಲು-ಸಾಲಾಗಿ ಬಾಗಿಲು ಹಾಕುತ್ತಿರುವುದು ಕನ್ನಡ ಚಿತ್ರರಂಗದ ಪಾಲಿಗೆ ಚಿತ್ರಪ್ರೇಮಿಗಳ ಪಾಲಿಗೆ ಒಳ್ಳೆಯ ಬೆಳವಣಿಗೆಯಂತೂ ಅಲ್ಲ.

Exit mobile version