ಭಾರತ ಸೇರಿ ಏಷ್ಯನ್ ಮಾರುಕಟ್ಟೆಗಳಿಗೆ ಕಚ್ಛಾ ತೈಲ ಬೆಲೆ ಏರಿಸಿದ ಸೌದಿ

ನವದೆಹಲಿ, ಏ.05: ಕಚ್ಛಾ ತೈಲ ಬೆಲೆ ವಿಚಾರದಲ್ಲಿ ಸೌದಿ ಅರೇಬಿಯಾವು ಏಷ್ಯನ್ ಮಾರುಕಟ್ಟೆಗೆ ಶಾಕ್ ಕೊಟ್ಟಿದೆ. ಸೌದಿ ಅರಾಮ್ಕೋ ಸಂಸ್ಥೆ ಮೇ ತಿಂಗಳಿಗೆ ಏಷ್ಯನ್ ಮಾರುಕಟ್ಟೆಗೆ ನೀಡುವ ಕಚ್ಛಾ ತೈಲದ ಬೆಲೆಯನ್ನು ಒಂದು ಬ್ಯಾರಲ್​ಗೆ 0.4 ಡಾಲರ್​ನಷ್ಟು ಬೆಲೆ ಏರಿಕೆ ಮಾಡಿದೆ. ಅಂದರೆ ಒಂದು ಬ್ಯಾರೆಲ್​ಗೆ 30 ರೂಪಾಯಿಯಷ್ಟು ಬೆಲೆ ಹೆಚ್ಚಳವಾಗಿದೆ. ಕುತೂಹಲದ ವಿಚಾರವೆಂದರೆ ಇದೇ ಅವಧಿಗೆ ಅಮೆರಿಕದ ಮಾರುಕಟ್ಟೆಗೆ 0.1 ಡಾಲರ್ ಹಾಗೂ ಐರೋಪ್ಯ ಮಾರುಕಟ್ಟೆಗಳಿಗೆ 0.2 ಡಾಲರ್ ಬೆಲೆ ಇಳಿಕೆ ಮಾಡಲಾಗಿದೆ. ಭಾರತ ಇದೀಗ ಒಂದು ಬ್ಯಾರೆಲ್ ಕಚ್ಛಾ ತೈಲಕ್ಕೆ 130 ರೂಪಾಯಿಗೂ ಹೆಚ್ಚು ಹಣ ನೀಡಿ ಕೊಳ್ಳಬೇಕಾಗಬಹುದು. ಈ ಪರಿಸ್ಥಿತಿಯಲ್ಲಿ ಬದಲಾವಣೆ ಆಗದೇ ಇದ್ದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್​ಗೆ 120 ರೂ ದಾಟಿದರೂ ಅಚ್ಚರಿ ಇಲ್ಲ.

ಅರಬ್​ನ ತೈಲ ದೇಶಗಳ ಗುಂಪಾಗಿರುವ OPEC ಕಳೆದ ಕೆಲ ತಿಂಗಳುಗಳಿಂದ ತೈಲೋತ್ಪಾದನೆ ನಿಲ್ಲಿಸಿವೆ. ಇದರಿಂದಾಗಿ ಕಚ್ಛಾ ತೈಲ ಬೆಲೆ ಬಹುತೇಕ ದ್ವಿಗುಣಗೊಂಡಿವೆ. ತೈಲ ಉತ್ಪಾದನೆ ಪುನಾರಂಭಿಸುವಂತೆ ಭಾರತ ಪದೇ ಪದೇ ಮನವಿ ಮಾಡುತ್ತಲೇ ಬಂದಿದೆ. ಇದು ಒಪೆಕ್ ರಾಷ್ಟ್ರಗಳು ಹಾಗೂ ಭಾರತದ ಮಧ್ಯೆ ಇರಿಸುಮುರುಸಿನ ಸ್ಥಿತಿಗೂ ಕಾರಣವಾಗಿದೆ. ಸೌದಿ ಅರೇಬಿಯಾ ವಿರುದ್ಧ ಭಾರತ ಕಠಿಣ ಭಾಷೆಯಲ್ಲೇ ಎಚ್ಚರಿಕೆ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ತೈಲ ಉತ್ಪಾದನೆ ಸ್ಥಗಿತಗೊಳಿಸುವ ತಮ್ಮ ನಿಲುವನ್ನು ಒಪೆಕ್ ದೇಶಗಳು ಮುಂದುವರಿಸಿವೆ. ಇದರಿಂದಾಗಿ, ಭಾರತ ಬೇರೆ ಬೇರೆ ಪರ್ಯಾಯ ತೈಲ ಮಾರುಕಟ್ಟೆಗಳನ್ನ ಶೋಧಿಸುವ ಕಾರ್ಯಕ್ಕೆ ಗಮನ ಕೊಡುತ್ತಿದೆ. ತಿಂಗಳ ಹಿಂದೆಯೇ ಕೇಂದ್ರ ಸರಕಾರ ಭಾರತೀಯ ಕಂಪನಿಗಳಿಗೆ ಈ ಬಗ್ಗೆ ಗಂಭೀರವಾಗಿ ಸೂಚನೆ ಕೂಡ ಕೊಟ್ಟಿದೆ.

Exit mobile version