ಕೊರೊನಾದ ಬೆನ್ನಲ್ಲೇ ಬಿಸಿಗಾಳಿಯ ಭೀತಿ: ವಿಶ್ವಸಂಸ್ಥೆ ವರದಿ

ಪ್ಯಾರಿಸ್,ಜೂ.23: ಜಾಗತಿಕ ತಾಪಮಾನವು ಹೀಗೆಯೇ ಮುಂದುವರಿದರೆ ನೂರಾರು ಕೋಟಿ ಜನರು ಭೀಕರ ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಕೊರೊನಾ ವೈರಸ್ ಸಾಂಕ್ರಾಮಿಕದ ಬೆನ್ನಲ್ಲೇ ಬಿಸಿಗಾಳಿಯು ಮಾರಣಾಂತಿಕವಾಗಿ ಪರಿಣಮಿಸುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇಂಗಾಲದ ಮಾಲಿನ್ಯವು ಮಾನವನಿಗೆ ತಡೆಯಲು ಅಸಾಧ್ಯವಾದಂಥ, ಮಿತಿ ಮೀರಿದ ಬಿಸಿಗಾಳಿಯ ಅಲೆಗಳನ್ನು ಸೃಷ್ಟಿಸಲು ಸುಮಾರು ಒಂದು ಶತಮಾನ ಬೇಕಾಗಬಹುದು ಎಂದು ಈ ಹಿಂದಿನ ಹವಾಮಾನ ಅಧ್ಯಯನಗಳು ಹೇಳಿದ್ದವು ಆದರೆ, ಇತ್ತೀಚಿನ ಅಧ್ಯಯನಗಳು ಬಿಸಿಗಾಳಿ ಅಲೆಯ ಅಪಾಯವು ಸಮೀಪದಲ್ಲೇ ಇದೆ ಎಂದು ಹೇಳಿವೆ. ಈ ಕುರಿತು ವಿಶ್ವಸಂಸ್ಥೆಯ ‘ಹವಾಮಾನ ಬದಲಾವಣೆ ಕುರಿತ ಅಂತರ್ ಸರ್ಕಾರಿ ಸಮಿತಿಯ (ಐಪಿಸಿಸಿ)’ 4,000 ಪುಟಗಳ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವರದಿ 2022ರ ಫೆಬ್ರುವರಿಯಲ್ಲಿ ಬಿಡುಗಡೆಯಾಗಲಿದೆ ಎಂದು ‘ಎಎಫ್‌ಪಿ’ ಸುದ್ದಿಸಂಸ್ಥೆ ವರದಿ ಮಾಡಿದೆ.

2015ರಲ್ಲಿ ಭಾರತ ಮತ್ತು ಪಾಕಿಸ್ತಾನದಲ್ಲಿ ಬಿಸಿಗಾಳಿಯಿಂದಾಗಿ 4,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. 2003ರಲ್ಲಿ ಪಶ್ಚಿಮ ಯುರೋಪ್‌ನಲ್ಲಿ ಬಿಸಿಗಾಳಿಯಿಂದಾಗಿ 50,000ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದರು.

Exit mobile version