ಕೊಲಂಬೊ, ಜು. 21: ಯುವ ಆಟಗಾರ ದೀಪಕ್ ಚಹರ್(ಅಜೇಯ 69) ಸಾಹಸಮಯ ಬ್ಯಾಟಿಂಗ್ ಹಾಗೂ ಸೂರ್ಯಕುಮಾರ್ ಯಾದವ್(53) ಅರ್ಧಶತಕದ ನೆರವಿನಿಂದ ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಮೂರು ವಿಕೆಟ್ ಗಳ ರೋಚಕ ಗೆಲುವು ಸಾಧಿಸಿದೆ.
ಇಲ್ಲಿನ ಪ್ರೇಮದಾಸ ಸ್ಟೇಡಿಯಂ ನಲ್ಲಿ ನಡೆದ ಹೊನಲು-ಬೆಳಕಿನ ಪಂದ್ಯದಲ್ಲಿ ಟೀಂ ಇಂಡಿಯಾ ಅಟಗಾರರ ಜವಾಬ್ದಾರಿಯುತ ಆಟಕ್ಕೆ ಶ್ರೀಲಂಕಾ ತಲೆಬಾಗಿತು. ಪಂದ್ಯದ ಗೆಲುವಿಗೆ 276 ರನ್ ಗಳ ಗುರಿಯನ್ನು ಪಡೆದ ಭಾರತ ಸೂರ್ಯಕುಮಾರ್, ದೀಪಕ್ ಚಹರ್ ಗಳಿಸಿದ ಆಕರ್ಷಕ ಅರ್ಧಶತಕದಿಂದ 49.1 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿ ಗೆಲುವಿನ ನಗೆಬೀರಿತು.
ಒಂದು ಹಂತದಲ್ಲಿ 193 ರನ್ ಗಳಿಗೆ 7 ವಿಕೆಟ್ ಗಳನ್ನ ಕಳೆದುಕೊಂಡಿದ್ದ ಭಾರತ ಸೋಲಿನತ್ತ ಮುಖ ಮಾಡಿತ್ತು. ಆದರೆ 8ನೇ ವಿಕೆಟ್ ಗೆ ಜೊತೆಯಾದ ದೀಪಕ್ ಚಹರ್ ಹಾಗೂ ಭುವನೇಶ್ವರ್ ಕುಮಾರ್ ಜೋಡಿ, ಅಜೇಯ 84 ರನ್ ಕಲೆಹಾಕುವ ಮೂಲಕ ತಂಡವನ್ನ ಗೆಲುವಿನ ದಡ ಸೇರಿಸಿದರು. ಆ ಮೂಲಕ ಇನ್ನು ಒಂದು ಪಂದ್ಯ ಇರುವಂತೆಯೇ ಭಾರತ 2-0 ಅಂತರದೊಂದಿಗೆ ಏಕದಿನ ಸರಣಿಯನ್ನು ಗೆದ್ದುಕೊಂಡಿದೆ.
ಭಾರತದ ಪರ ಸೂರ್ಯಕುಮಾರ್ ಯಾದವ್ 53 ರನ್(44 ಎಸೆತ, 6 ಬೌಂಡರಿ), ಮನೀಷ್ ಪಾಂಡೆ 37 ರನ್(31 ಎಸೆತ, 3 ಬೌಂಡರಿ) ಹೊಡೆದು ಔಟಾದರು. ದೀಪಕ್ ಚಹರ್ ಔಟಾಗದೇ 69 ರನ್(82 ಎಸೆತ, 7 ಬೌಂಡರಿ, 1 ಸಿಕ್ಸರ್), ಭುವನೇಶ್ವರ್ ಕುಮಾರ್ ಔಟಾಗದೇ 19 ರನ್(28 ಎಸೆತ, 2 ಬೌಂಡರಿ) ಹೊಡೆದರು. ಟೀಂ ಇಂಡಿಯಾಕ್ಕೆ ಅದ್ಭುತ ಗೆಲುವು ತಂದುಕೊಟ್ಟ ದೀಪಕ್ ಚಹರ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ, ಆವಿಷ್ಕಾ ಫೆರ್ನಾಂಡೋ 50 ರನ್(71 ಎಸೆತ, 4 ಬೌಂಡರಿ, 1 ಸಿಕ್ಸರ್), ಮಿನೋದ್ ಭನುಕಾ 36 ರನ್(42 ಎಸೆತ, 6 ಬೌಂಡರಿ), ಧನಂಜಯ ಡಿಸಿಲ್ವಾ 32 ರನ್(45 ಎಸೆತ, 1 ಬೌಂಡರಿ), ಚರಿತ್ ಅಸಲಂಕಾ 65 ರನ್(68 ಎಸೆತ, 6 ಬೌಂಡರಿ) ಹೊಡೆದರೆ ಕೊನೆಯಲ್ಲಿ ಚಮಿಕಾ ಕರುಣರತ್ನೆ 44 ರನ್(33 ಎಸೆತ, 5 ಬೌಂಡರಿ) ಹೊಡೆದ ಪರಿಣಾಮ ತಂಡ 275 ರನ್ ಗಳಿಸಿತು. ಏಕದಿನ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯ ಜು.23ರಂದು ನಡೆಯಲಿದೆ.