60 ಸಾವಿರ ಗಡಿ ಸಮೀಪದತ್ತ ಸೆನ್ಸೆಕ್ಸ್‌

ಮುಂಬೈ ಸೆ 21 : ಭಾರತೀಯ ಷೇರು ಪೇಟೆ ಸೂಚ್ಯಂಕ ತನ್ನದೇ ದಾಖಲೆಗಳನ್ನು ಮುರಿಯುತ್ತಿದ್ದು, ಮೊಟ್ಟ ಮೊದಲ ಬಾರಿಗೆ 59 ಸಾವಿರ ಅಂಕಗಳ ಮೈಲುಗಲ್ಲನ್ನು ದಾಟಿತು. ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 490 ಅಂಕ ಕುಸಿತ ಕಂಡಿದ್ದು, 58,525 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟನ್ನು ಮುಕ್ತಾಯಗೊಳಿಸಿದೆ. ಇದೇ ರೀತಿ NSE ನಿಫ್ಟಿ ಕೂಡ 204 ಅಂಕ ಕುಸಿದಿದ್ದು, 17,425 ಅಂಕಗಳ ಮಟ್ಟ ತಲುಪಿದೆ.

ಮಧ್ಯಂತರ ವಹಿವಾಟಿನ ವೇಳೆ ಹೂಡಿಕೆದಾರರು ಲಾಭ ಪಡೆಯುವಂತಾಗಿದ್ದು, ಸುಮಾರು 200 ಅಂಕ ಏರಿಕೆಯೊಂದಿಗೆ ಸೆನ್ಸೆಕ್ಸ್ 59 ಸಾವಿರದ ಗಡಿ ದಾಟಿತ್ತು. ಈತನ್ಮಧ್ಯೆ ಷೇರು ಮಾರಾಟದ ಒತ್ತಡದ ಹಿನ್ನೆಲೆಯಲ್ಲಿ ಸೆನ್ಸೆಕ್ಸ್ ಸೂಚ್ಯಂಕ ಮತ್ತೆ ಕುಸಿತ ಕಂಡಿತ್ತು.

ಎನ್‌ಟಿಪಿಸಿ ಷೇರು ಶೇ.7ರಷ್ಟು ಗಳಿಕೆ ಯೊಂದಿಗೆ ಅತಿ ಹೆಚ್ಚು ಲಾಭಗಳಿಸಿತು. ಭಾರ್ತಿ ಏರ್‌ಟೆಲ್‌, ಎಚ್‌ಸಿಎಲ್‌ ಟೆಕ್‌, ಟೈಟಾನ್‌, ಪವರ್‌ ಗ್ರಿಡ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌,ಇಂಡಸ್‌ಇಂಡ್‌ ಬ್ಯಾಂಕ್‌, ಇನ್ಫೋಸಿಸ್‌ ಕಂಪನಿಗಳ ಷೇರುಗಳೂ ಲಾಭ ಗಳಿಸಿವೆ. ಆದರೆ ಎಕ್ಸಿಸ್‌ ಬ್ಯಾಂಕ್‌, ಏಷ್ಯನ್‌ ಪೇಂಟ್ಸ್‌, ಅಲ್ಟ್ರಾಟೆಕ್‌ ಸಿಮೆಂಟ್‌, ನೆಸ್ಲೆಇಂಡಿಯಾ, ಸನ್‌ ಫಾರ್ಮಾ, ಎಚ್‌ಡಿಎಫ್‌ಸಿ ಬ್ಯಾಂಕ್‌ಗಳ ಷೇರು ದರಗಳು ಕುಸಿಯಿತು.

ವಿಶ್ವದ 6ನೇ ದೊಡ್ಡ ಷೇರು ಮಾರುಕಟ್ಟೆಯಾಗಿ ಭಾರತ

ವಿಶ್ವದ 6ನೇ ದೊಡ್ಡ ಷೇರು ಮಾರುಕಟ್ಟೆಯಾಗಿ ಭಾರತ ಗುರುತಿಸಿಕೊಂಡಿದ್ದು, ಭಾರತ ಇದೀಗ ಫ್ರಾನ್ಸ್‌ ಅನ್ನು ಹಿಂದಿಕ್ಕಿ ಜಗತ್ತಿನ 6ನೇ ಅತಿ ದೊಡ್ಡ ಷೇರು ಮಾರುಕಟ್ಟೆ ಎನ್ನಿಸಿದೆ. ಭಾರತೀಯ ಷೇರು ಮಾರುಕಟ್ಟೆ ಬಂಡವಾಳ 3.41 ಲಕ್ಷ ಕೋಟಿ ಡಾಲರ್‌ಗೆ ಏರಿಕೆಯಾಗಿದೆ. ಫ್ರಾನ್ಸ್‌ ಷೇರು ಮಾರುಕಟ್ಟೆ ಬಂಡವಾಳ ಮೌಲ್ಯ 3.40 ಲಕ್ಷ ಕೋಟಿ ಡಾಲರ್‌ಗಳಾಗಿದೆ. ಅಮೆರಿಕ (51 ಲಕ್ಷ ಕೋಟಿ ಡಾಲರ್‌), ಚೀನಾ (12 ಲಕ್ಷ ಕೋಟಿ ಡಾಲರ್‌), ಜಪಾನ್‌ (7.43 ಲಕ್ಷ ಕೋಟಿ ಡಾಲರ್‌), ಹಾಂಕಾಂಗ್‌ (6.52 ಲಕ್ಷ ಕೋಟಿ ಡಾಲರ್‌) ಬ್ರಿಟನ್‌ (3.6 ಲಕ್ಷ ಕೋಟಿ ಡಾಲರ್‌) ಮೊದಲ 5 ಸ್ಥಾನಗಳಲ್ಲಿವೆ.

Exit mobile version