ಗಲ್ಲುಶಿಕ್ಷೆಗೆ ಗುರಿಯಾಗಿದ್ದ ದೇಶದ ಮೊದಲ ಮಹಿಳಾ ಅಪರಾಧಿ ಶಬ್ನಮ್ ಮತ್ತೊಮ್ಮೆ ಕ್ಷಮಾದಾನ ಅರ್ಜಿ

ನವದೆಹಲಿ, ಫೆಬ್ರವರಿ 19: ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ತನ್ನ ಕುಟುಂಬದ ಏಳು ಮಂದಿ ಕೊಲೆ ಮಾಡಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಶಬ್ನಮ್  ಇದೀಗ ಕ್ಷಮಾದಾನ ಕೋರಿ ಉತ್ತರ ಪ್ರದೇಶ ರಾಜ್ಯಪಾಲ ಆನಂದಿಬೆನ್ ಪಟೇಲ್‌ಗೆ ಹೊಸ ಅರ್ಜಿ ಸಲ್ಲಿಸಿದ್ದಾರೆ.

ಮಥುರಾ ಜೈಲಿನಲ್ಲಿ ಶಬ್ನಮ್ ಗಲ್ಲಿಗೇರಿಸಲು ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ ಶಬ್ನಮ್ ಈ ಅರ್ಜಿ ಸಲ್ಲಿಸಿದ್ದಾರೆ.

ಶಬ್ನಮ್ ಅವರಿಗೆ ಸಲೀಂ ಎಂಬಾತನೊಂದಿಗೆ ಪ್ರೀತಿಯಾಗಿ ಮದುವೆ ಆಗಬೇಕೆಂಬ ಇವರ ಬೇಡಿಕೆಯನ್ನು ಕುಟುಂಬಸ್ಥರು ನಿರಾಕರಿಸಿದ ಹಿನ್ನಲೆಯಲ್ಲಿ 2008ರ ಏಪ್ರಿಲ್ 14ರಂದು ಪ್ರಿಯತಮ ಸಲೀಂನೊಂದಿಗೆ ಸೇರಿ ತನ್ನ ಕುಟುಂಬದ ಏಳು ಮಂದಿಯನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ ಶಬ್ನಮ್ ಅವರಿಗೆ  ಮರಣ ದಂಡನೆ ಶಿಕ್ಷೆಯಾಗಿತ್ತು. ಹಾಲಿನಲ್ಲಿ ಮತ್ತು ಬರುವ ಔಷಧಿ ನೀಡಿ ಕುಟುಂಬ ಸದಸ್ಯರನ್ನು ಕೊಲೆ ಮಾಡಿ ಪುಟ್ಟ ಮಗುವನ್ನೂ ಬಿಡದೆ ಅದರ ಕತ್ತು ಹಿಸುಕಿ ಕೊಲೆ ಮಾಡಿದ್ದ ಶಬ್ನಮ್ ತನಗೇನೂ ಗೊತ್ತಿಲ್ಲವೆಂಬಂತೆ ನಟಿಸಿದ್ದರು. ನಂತರ ಈ ಕ್ರತ್ಯ ಬೆಳಕಿಗೆ ಬಂದು  ತನ್ನ ಪ್ರಿಯತಮ ಸಲೀಂ ಹಾಗೂ ಶಬ್ನಮ್ ಇಬ್ಬರನ್ನೂ ಬಂಧಿಸಲಾಗಿತ್ತು. 

2010ರಲ್ಲಿ ಈ ಇಬ್ಬರೂ ಸೆಷನ್ ಕೋರ್ಟ್‌ ಆದೇಶ ಪ್ರಶ್ನಿಸಿ ಅಲಹಾಬಾದ್ ಹೈ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟ್ ಕೂಡ ಮರಣದಂಡನೆ ಶಿಕ್ಷೆ ಎತ್ತಿಹಿಡಿದಿತ್ತು. ನಂತರ 2015ರಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಅಲ್ಲಿಯೂ ಇವರಿಗೆ ಸೋಲಾಗಿತ್ತು. ಈ ಬೆಳವಣಿಗೆ ನಂತರ ಶಬ್ನಮ್ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದರು. ಅದು ಕೂಡ ಫಲ ನೀಡಲಿಲ್ಲ.

ಸ್ವತಂತ್ರ್ಯ ಭಾರತದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಲಿರುವ ಮೊದಲ ಮಹಿಳಾ ಕೈದಿ ಶಬ್ನಮ್ ಎನ್ನಲಾಗಿತ್ತು. ಉತ್ತರ ಪ್ರದೇಶದ ಮಥುರಾದಲ್ಲಿ ನೇಣುಗಂಬಕ್ಕೆ ಏರುತ್ತಿರುವ ಏಕೈಕ ಮಹಿಳಾ ಕೈದಿ ಕೂಡ ಆಗಿದ್ದರು. 1870ರಲ್ಲಿ, ಬ್ರಿಟಿಷರ ಕಾಲದಲ್ಲಿ ಮಹಿಳೆಯರನ್ನು ಗಲ್ಲಿಗೇರಿಸಲು ಮಥುರಾ ಜೈಲಿನಲ್ಲಿ ನೇಣುಗಂಬದ ಕೋಣೆ ನಿರ್ಮಿಸಲಾಗಿತ್ತು. ಸ್ವಾತಂತ್ರ್ಯಾನಂತರ ಇದುವರೆಗೂ ಯಾವ ಮಹಿಳೆಯನ್ನೂ ಗಲ್ಲಿಗೇರಿಸಿರಲಿಲ್ಲ. ಈಚೆಗೆ ಶಬ್ನಮ್ ಳನ್ನು ಗಲ್ಲಿಗೇರಿಸಲು ಸಿದ್ಧತೆ ನಡೆಯುತ್ತಿತ್ತು. ಈ ಬೆನ್ನಲ್ಲೇ ಮತ್ತೊಮ್ಮೆ ಶಬ್ನಮ್ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದಾರೆ

Exit mobile version