ಶಾಲಾ-ಕಾಲೇಜು ಆರಂಭದ ದಿನಾಂಕ ಮತ್ತೆ ಮುಂದೂಡಿಕೆ

ಚೆನ್ನೈ, ನ. 12: ಕೊರೊನಾ ಆತಂಕದ ನಡುವೆಯೂ ನ.16ರಿಂದ ಶಾಲಾ-ಕಾಲೇಜುಗಳ ಆರಂಭಕ್ಕೆ ನಿರ್ಧರಿಸಿದ್ದ ತಮಿಳುನಾಡು ಸರ್ಕಾರ, ಶಾಲಾ-ಕಾಲೇಜು ಆರಂಭಿಸುವ ನಿರ್ಧಾರದಿಂದ ಹಿಂದೆ ಸರಿದಿದ್ದು, ಸ್ಪಷ್ಟ ನಿರ್ಧಾರದ ಬಳಿಕ ಶಾಲೆ ಆರಂಭಿಸುವ ಹೊಸ ದಿನಾಂಕವನ್ನು ಪ್ರಕಟಿಸುವ ತೀರ್ಮಾನಕ್ಕೆ ಬಂದಿದೆ.

ಕೊರೊನಾ ನಡುವೆಯೂ ನ.16ರಿಂದ 9ನೇ ತರಗತಿಯಿಂದ 12ನೇ ತರಗತಿಯವರೆಗೆ ಶಾಲಾ-ಕಾಲೇಜುಗಳು ಹಾಗೂ ಹಾಸ್ಟೆಲ್‌ಗಳನ್ನು ತೆರೆಯಲು ಸರ್ಕಾರ ನಿರ್ಧರಿಸಿತ್ತು. ಆದರೆ ಇದೀಗ ಶಾಲೆಗಳನ್ನು ಆರಂಭಿಸುವ ಕುರಿತು ಸರ್ಕಾರ ಹಿಂದೆ ಸರಿದಿದ್ದು, ಪೋಷಕರು ಹಾಗೂ ಶಿಕ್ಷಕರು ಸಮಾಲೋಚನೆ ನಡೆಸಿ ಅಭಿಪ್ರಾಯ ಸಂಗ್ರಹಿಸಬೇಕು ಎಂದು ಎಲ್ಲಾ ಶಾಲೆಗಳಿಗೆ ನಿರ್ದೇಶಿಸಲಾಗಿತ್ತು. ಕೆಲವು ಕಡೆ ಪೋಷಕರು ಶಾಲೆಗಳನ್ನು ಆರಂಭಿಸಬೇಕು ಎಂದಿದ್ದರೆ, ಇನ್ನೂ ಕೆಲವು ಕಡೆಗಳಲ್ಲಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಸದ್ಯ ಶಾಲಾ-ಕಾಲೇಜು ಆರಂಭ ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಹೊರಡಿಸಿರುವ ಮಾರ್ಗಸೂಚಿಗಳನ್ನು ಪರಿಗಣಿಸಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ಅಂತಿಮ ವರ್ಷದ ವಿಜ್ಞಾನ, ತಾಂತ್ರಿಕ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಡಿಸೆಂಬರ್‌ 2 ರಿಂದ ಕಾಲೇಜು ಆರಂಭಿಸಿ, ಈ ವಿದ್ಯಾರ್ಥಿಗಳಿಗೆ ಮಾತ್ರವೇ ಹಾಸ್ಟೆಲ್‌ಗಳನ್ನು ತೆರೆದು ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು ಎಂದು ತಿಳಿದುಬಂದಿದೆ. ಉಳಿದಂತೆ ವಿದ್ಯಾರ್ಥಿಗಳಿಗೆ ಕಾಲೇಜು ಪುನರಾರಂಭದ ದಿನಾಂಕವನ್ನು ಬಳಿಕ ಪ್ರಕಟಿಸಲಾಗುವುದು. ಅಲ್ಲಿಯವರೆಗೆ ಆನ್‌ಲೈನ್‌ ತರಗತಿಗಳು ಮುಂದುವರಿಯಲಿವೆ ಎಂದು ಮಾಹಿತಿ ನೀಡಿದೆ.

Exit mobile version