ಶಾಲಾ ಕಾಲೇಜು ಪುನರಾರಂಭದ ಕುರಿತು ಇಂದು ಸಂಪುಟ ಸಭೆಯಲ್ಲಿ ನಿರ್ಧಾರ!

ಬೆಂಗಳೂರು, ಡಿ. 28: ‘ಜನವರಿ 1ರಿಂದ ಶಾಲಾ- ಕಾಲೇಜು ಆರಂಭಿಸುವ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಿದ್ದೇವೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಗೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ, ‘ಜನವರಿ 1ರಿಂದ ಶಾಲೆ ಕಾಲೇಜು ಆರಂಭಿಸುವುದು ಫಿಕ್ಸ್‌ ಅದರಲ್ಲೇನು ಗೊಂದಲವಿಲ್ಲ. ಆದರೂ ಈ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸುತ್ತೇವೆ’ ಎಂದರು.

ಗ್ರಾಮ ಪಂಚಾಯಿತಿ ಚುನಾವಣೆಯ ಕುರಿತು ಮಾತನಾಡಿದ ಸಿಎಂ ಯಡಿಯೂರಪ್ಪ, ‘ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುತ್ತಾರೆ. ಕಾಂಗ್ರೆಸ್‌ಗೆ ಉತ್ಸಾಹ ಇಲ್ಲ ಎಂಬುದು ಗೊತ್ತಾಗುತ್ತಿದೆ’ ಎಂದು  ಹೇಳಿದರು.

‘ಅಧಿಕಾರ ವಿಕೇಂದ್ರೀಕರಣ ಸಂದರ್ಭದಲ್ಲಿ ಹಲವು ವಿದ್ಯಾವಂತರು ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಶೇ 95ರಷ್ಟು ಸ್ಥಾನಗಳಲ್ಲಿ ಗೆಲ್ಲೋದು ನೂರಕ್ಕೆ ನೂರು ನಿಶ್ಚಿತ. ಚುನಾವಣೆಯಲ್ಲಿ ಕಾಂಗ್ರೆಸ್‌ನ ಯಾವುದೇ ನಾಯಕರು ಆಸಕ್ತಿ ವಹಿಸಿರಲಿಲ್ಲ. ಮುಂದೆ ಗ್ರಾಮ ಪಂಚಾಯಿತಿಗೆ ಆಯ್ಕೆಯಾಗುವ ಸದಸ್ಯರಿಗೆ ಹೆಚ್ಚಿನ ಶಕ್ತಿ ತುಂಬುವ ಕೆಲಸ ಮಾಡ್ತೇವೆ. ಗ್ರಾಮಗಳ ಅಭಿವೃದ್ಧಿ ಮಾಡಲು ಸದಸ್ಯರಿಗೆ ಸಹಕಾರ ಕೊಡಲು ಪ್ರಾಮಾಣಿಕ ಕೆಲಸ ಮಾಡುತ್ತೇವೆ’ ಎಂದು ಹೇಳಿದ್ದಾರೆ.

Exit mobile version