Shivamogga: ಲೋಕಸಭೆ ಚುನಾವಣೆ ಹತ್ತಿರ ಸಮೀಪಿಸುತ್ತಿರುವಂತೆ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು ಎಂದು ರಾಜ್ಯ ಕಾಂಗ್ರೆಸ್ (Congress) ನಾಯಕರು ರಣತಂತ್ರ ರೂಪಿಸುತ್ತಿರುವ ಬೆನ್ನಲ್ಲೇ ಇದಕ್ಕೆ ತದ್ವಿರುದ್ಧವಾಗಿ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ (Shamanuru Shivashankarappa) ಅವರು, ಮುಂದಿನ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಸಂಸದ ಬಿವೈ ರಾಘವೇಂದ್ರ ಅವರು ಗೆಲ್ಲಬೇಕು ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ (Shivamogga) ಮಾತನಾಡಿದ ಅವರು, ಮುಂದಿನ ಲೋಕಸಭಾ ಚುನಾವಣೆಯಲ್ಲೂ ರಾಘವೇಂದ್ರ ಗೆಲ್ಲಬೇಕು. ಜನರ ಅಭಿಲಾಷೆಯಂತೆ ಕೆಲಸ ಮಾಡಿದ್ದು, ಚುನಾವಣೆಯಲ್ಲಿ ಅವರನ್ನು ಆಯ್ಕೆ ಮಾಡಬೇಕಿರುವುದು ಜನರ ಕರ್ತವ್ಯ ಎಂದು ಬಿಜೆಪಿ ಸಂಸದ ಬಿವೈ ರಾಘವೇಂದ್ರ (B.Y Raghavendra) ಅವರನ್ನು ಕಾಂಗ್ರೆಶ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಕೊಂಡಾಡಿದ್ದಾರೆ.
ಜಿಲ್ಲೆಯ ಜನರು ಉತ್ತಮ ಸಂಸದರನ್ನು ಆಯ್ಕೆ ಮಾಡಿದ್ದೀರಿ. ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಆಗಿದೆ. ಜನರ ಅಭಿಲಾಷೆಯಂತೆ ರಾಘವೇಂದ್ರ ಅವರು ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಮುಂದಿನ 2-3 ತಿಂಗಳಿನಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಮುಂದೆಯೂ ರಾಘವೇಂದ್ರರನ್ನು ಆಯ್ಕೆ ಮಾಡಬೇಕಿರುವುದು ಜನರ ಕರ್ತವ್ಯ ಎಂದು ಶಿವಮೊಗ್ಗದ ಬೆಕ್ಕಿನ ಕಲ್ಮಠದಲ್ಲಿ ಬಸವಶ್ರೀ ಪ್ರಶಸ್ತಿ ಸ್ವೀಕಾರ ಮಾಡಿದ ನಂತರ ಮಾತನಾಡಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ, ಜಿಲ್ಲೆಯಲ್ಲಿ ಆಗಿರುವ ಅಭಿವೃದ್ಧಿಯನ್ನು ಗಮನಿಸಿದರೆ ನೀವು ಉತ್ತಮ ಸಂಸದರನ್ನೇ ಆರಿಸಿದ್ದೀರಿ. ರಾಘವೇಂದ್ರ ಅವರಂಥ ಸಂಸದರನ್ನು ಪಡೆದ ನೀವೇ ಧನ್ಯರು. ತಮ್ಮಿಂದ ಆಗದ ಕೆಲಸವನ್ನು ಮಾಡಿ ತೋರಿಸಿದ್ದಾರೆ. ಈ ಬಾರಿ ಬಿಜೆಪಿಯಿಂದ (BJP) ಅವರಿಗೆ ಟಿಕೆಟ್ ಪಕ್ಕಾ. ಹಾಗಾಗಿ ಅವರನ್ನು ಮತ್ತೆ ಆಯ್ಕೆ ಮಾಡಿ. ವೀರಶೈವ ಲಿಂಗಾಯತರಲ್ಲಿ ಅನೇಕ ಒಳಪಂಗಡಗಳಿವೆ, ಎಲ್ಲರೂ ಒಂದೇ ಎಂಬ ಭಾವನೆ ಬಂದಾಗ ಏಕತೆ ಮೂಡುತ್ತದೆ ಎಂದು ಶಿವಶಂಕರಪ್ಪ ಹೇಳಿದ್ದಾರೆ.
ಭವ್ಯಶ್ರೀ ಆರ್ ಜೆ