ಶಿವಮೊಗ್ಗಕ್ಕೂ ವ್ಯಾಪಿಸಿದ ರೂಪಾಂತರಿ ಕೊರೋನಾ‌ ಸೋಂಕು

ಶಿವಮೊಗ್ಗ, ಡಿ. 30: ಬ್ರಿಟನ್‌ನ ರೂಪಾಂತರ ಕೊರೊನಾ ವೈರಸ್ ಸೋಂಕು ರಾಜ್ಯದಲ್ಲಿಯೂ ಲಗ್ಗೆ ಇಟ್ಟಿದ್ದು, ನಿನ್ನೆ ಬೆಂಗಳೂರಿನ 3 ಜನರಲ್ಲಿ ಈ ಸೋಂಕು ಕಂಡು ಬಂದಿತ್ತು. ಆತಂಕಕಾರಿ ಸಂಗತಿಯೆಂದರೆ ಇಂದು ಇಂದು ಶಿವಮೊಗ್ಗದ ಒಂದೇ ಕುಟುಂಬದ 4 ಮಂದಿಗೆ ತಗುಲಿದೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ತಿಳಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯುಕೆಯಿಂದ ವಾಪಸ್‌ ಆದವರ ಪೈಕಿ 107 ಜನರಿಗೆ ಆರ್.ಟಿ-ಪಿಸಿಆರ್ ಪಾಸಿಟಿವ್ ಬಂದಿತ್ತು. ಇವರೆಲ್ಲರ ಮಾದರಿಯನ್ನು ಸೀಕ್ವೆನ್ಸ್ ಪರೀಕ್ಷೆ ಮಾಡಲಾಗಿತ್ತು. 107ರಲ್ಲಿ 20 ಜನರಿಗೆ ರೂಪಾಂತರಿ ವೈರಸ್ ಕಂಡು ಬಂದಿದೆ.

ಬೆಂಗಳೂರು 3 ಮತ್ತು ಶಿವಮೊಗ್ಗದ ನಾಲ್ವರಲ್ಲಿ ಹೊಸ ರೂಪಾಂತರ ವೈರಸ್ ಕಂಡು ಬಂದಿದೆ. ಸೋಂಕಿತರ ಸಂಪರ್ಕಿತರನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರಿಸಲಾಗಿದೆ ಎಂದರು.

ಬೆಂಗಳೂರಿನ ಮೂವರು, 39 ಜನರೊಂದಿಗೆ ಸಂಪರ್ಕ ಹೊಂದಿದ್ದರು. ಶಿವಮೊಗ್ಗ ಸೋಂಕಿತರ ಸಂಪರ್ಕದಲ್ಲಿದ್ದವರ ಕೆಲವರ ವರದಿ ಪಾಸಿಟಿವ್ ಬಂದಿದೆ ಎಂದು ಹೇಳಿದ್ದಾರೆ.

ಸೋಂಕಿತರ ಆರೋಗ್ಯ ಸ್ಥಿರವಾಗಿದೆ. ಎಲ್ಲರಿಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವೈರಸ್ ತೀವ್ರತೆ ಕಡಿಮೆ, ಆದರೆ ಹರಡುವ ಗುಣ ಶೇ.70ಕ್ಕಿಂತ ಅಧಿಕ. ಹಾಗಾಗಿ ಸರ್ಕಾರ ಕೊರೊನಾ ಹರಡುವಿಕೆಯನ್ನು ತಡೆಯುವ ಕೆಲಸ ಮಾಡುತ್ತಿದೆ. ನಾಪತ್ತೆ ಆಗಿರುವ ಕೆಲವರ ಶೋಧದಲ್ಲಿ ಗೃಹ ಇಲಾಖೆ ತೊಡಗಿಕೊಂಡಿದೆ ಎಂದು ತಿಳಿಸಿದರು.

Exit mobile version