ಬರ ಪರಿಹಾರ ನಾವು ಕೇಳಿದ್ದಕ್ಕಿಂತ ಕೇಂದ್ರ ಸರ್ಕಾರ ಬಹಳ ಕಡಿಮೆ ಕೊಟ್ಟಿದೆ: ಸಿಎಂ ಸಿದ್ದರಾಮಯ್ಯ

Kalburgi: ಕೇಂದ್ರ ಸರ್ಕಾರದಿಂದ ಈಗ ಬಿಡುಗಡೆಗೊಂಡಿರುವ ಬರ ಪರಿಹಾರ ಮೊತ್ತ ಬಹಳ ಕಡಿಮೆ. ಅಷ್ಟಕ್ಕೂ ನಾವು ಕೇಳಿದ್ದು 18, 172 ಕೋಟಿ ರೂಪಾಯಿ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿನಲ್ಲಿಯೇ ಕೇಳಿದ್ದೆವು. ಕರ್ನಾಟಕದಲ್ಲಿ ಬರದಿಂದ ಆಗಿರುವ ಒಟ್ಟು ಬೆಳೆ ನಷ್ಟ 35 ಸಾವಿರ ಕೋಟಿ ರೂಪಾಯಿಗಳಷ್ಟು. ರಾಜ್ಯದ 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಎನ್.ಡಿ.ಆರ್.ಎಫ್ (NDRF) ನಿಯಮ ಪ್ರಕಾರ ನಾವು ಕೇಳಿದಷ್ಟು ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ ಅವರಿಗೆ ಬೇಕಾದಷ್ಟನ್ನೇ ಬಿಡುಗಡೆ ಮಾಡಿ ಕನ್ನಡಿಗರ ಕಣ್ಣೊರೆಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಪ್ರತಿಕ್ರಿಯಿಸಿದ್ದಾರೆ.

ಕಲಬುರಗಿಯಲ್ಲಿಂದು (Kalburgi) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರ ಪರಿಹಾರ ಮೊತ್ತ ಬಿಡುಗಡೆಯ ಬಗ್ಗೆ ಕೇಂದ್ರ ಸಚಿವರುಗಳಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್ (Amit Shah, Nirmala Seetharaman) ಅವರೆಲ್ಲ ಸುಳ್ಳು ಹೇಳಿದ್ದರು. ಚುನಾವಣೆ ಗಿಮಿಕ್ ಮಾಡಿದ್ದರು.ಕರ್ನಾಟಕ ಸರ್ಕಾರ ವಿಳಂಬವಾಗಿ ಮನವಿ ಕೊಟ್ಟಿದೆ ಎಂದರು. ನಂತರ ಚುನಾವಣಾ ನೀತಿ ಸಂಹಿತೆ ಜಾರಿಯಾಯಿತು ಎಂದು ಹೇಳಿ ಪರಿಹಾರ ವಿಳಂಬವಾಗುತ್ತಿದೆ ಎಂದು ಸುಳ್ಳು ಹೇಳಿಕೊಂಡು ಬಂದರು.

ಬರಗಾಲಕ್ಕೆ ಬದಲು 5 ಗ್ಯಾರಂಟಿ ಯೋಜನೆಗಳ (Guarantee Scheme) ಅನುಷ್ಠಾನಕ್ಕೆ ಹಣ ಕೇಳುತ್ತಿದ್ದಾರೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿ ಜನರ ಮನದಲ್ಲಿ ನಮ್ಮ ಸರ್ಕಾರದ ಕುರಿತು ತಪ್ಪು ಮಾಹಿತಿ ನೀಡಿ ಜನರನ್ನು ಅಡ್ಡದಾರಿಗೆ ಎಳೆಯುವ ಪ್ರಯತ್ನ ಮಾಡಿದರು. ನಿಜ ಹೇಳಬೇಕೆಂದರೆ ನಾವು ಗ್ಯಾರಂಟಿಗಳ ಅನುಷ್ಠಾನಕ್ಕೆ ಕೇಂದ್ರದಿಂದ ಒಂದು ಪೈಸೆನೂ ಕೇಳಿಲ್ಲ, ಕೇಳುವುದೂ ಇಲ್ಲ. ಇಬ್ಬರೂ ಕೇಂದ್ರ ಸಚಿವರು ನಮ್ಮ ಪಕ್ಷದ ಕುರಿತಾಗಿ ಸುಳ್ಳು ಹೇಳಿದರು.

2023ರ ಡಿಸೆಂಬರ್ 19ನೇ ತಾರೀಖಿನಂದು ಪ್ರಧಾನಿ ಮೋದಿಯವರನ್ನು (Modi) ಭೇಟಿ ಮಾಡಿದೆ. ಆಗ ಅವರು ಗೃಹ ಸಚಿವರ ನೇತೃತ್ವದಲ್ಲಿ ಉನ್ನತ ಸಮಿತಿಯಿದೆ, ಅವರ ಗಮನಕ್ಕೆ ತರುತ್ತೇನೆ ಎಂದರು. ನಂತರ ಡಿಸೆಂಬರ್ (December) 20ರಂದು ಅಮಿತ್ ಶಾ ಅವರನ್ನು ಭೇಟಿ ಮಾಡಿದಾಗ ಡಿಸೆಂಬರ್ 23ಕ್ಕೆ ಉನ್ನತ ಮಟ್ಟದ ಸಮಿತಿ ಸಭೆ ಕರೆದಿದ್ದು ಅಂದು ಬರ ಪರಿಹಾರ ಬಿಡುಗಡೆಗೆ ಇತ್ಯರ್ಥ ಮಾಡುತ್ತೇನೆ ಎಂದರು ಆದರೆ ಮರೆತೇಬಿಟ್ಟರು. ಈಗ ಸುಪ್ರೀಂ ಕೋರ್ಟ್ (Supreme Court) ಆದೇಶ ನೀಡಿದ ಮೇಲೆ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿದೆ.

ಇತಿಹಾಸದಲ್ಲಿಯೇ ಸುಪ್ರೀಂ ಕೋರ್ಟ್ ಈ ರೀತಿ ಬರ ಪರಿಹಾರ ಬಿಡುಗಡೆ ಮಾಡಲು ಆದೇಶ ನೀಡಿರುವುದು ಇದೇ ಮೊದಲು. ಆದರೂ ಬುದ್ಧಿ ಕಲಿಯದ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಮೊತ್ತ ಬಹಳ ಕಡಿಮೆ ಎಂದಿದ್ದಾರೆ.

Exit mobile version