‘ಸಿದ್ದು ಕಾಂಗ್ರೆಸ್‍ಗೆ ಶನಿ’ ಪೂಜಾರಿ ಮಾತು ನೆನಪಿಸಿದ ಬಿಜೆಪಿ!

siddarmaiah

ಪಂಚರಾಜ್ಯಗಳ ಫಲಿತಾಂಶವನ್ನು ಕಟುವಾಗಿ ಟೀಕಿಸಿರುವ ಸಿದ್ದರಾಮಯ್ಯ, ಬಿಜೆಪಿ ಕೋಮು ಧ್ರುವೀಕರಣದಿಂದ ಗೆದ್ದಿದೆ ಎಂದಿದ್ದರು. ಇದಕ್ಕೆ ಉತ್ತರ ನೀಡಿರುವ ರಾಜ್ಯ ಬಿಜೆಪಿ ಘಟಕ, “ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಅಂಟಿನ ಶನಿ. ಅವನಿಂದಲೇ ಪಕ್ಷ ಹಾಳಾಗುತ್ತದೆ” ಎಂದು ಈ ಹಿಂದೆ ಕಾಂಗ್ರೆಸ್‍ನ ಹಿರಿಯ ನಾಯಕ ಜನಾರ್ಧನ್ ಪೂಜಾರಿ ಹೇಳಿದ ಮಾತನ್ನು ಬಿಜೆಪಿ ನೆನಪಿಸಿದೆ. “ರಾಜ್ಯದಲ್ಲಿ ಸುರಕ್ಷಿತ ಕ್ಷೇತ್ರದ ಹುಡುಕಾಟದಲ್ಲಿರುವ ಸಿದ್ದರಾಮಯ್ಯವರು, ಪಂಚರಾಜ್ಯಗಳ ಫಲಿತಾಂಶ ಬಂದ ನಂತರವೂ ರಾಜ್ಯದ ಯಾವುದಾದರೂ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ನಿಂತು ಗೆಲ್ಲುವ ವಿಶ್ವಾಸವಿದೆಯೇ?!” ಎಂದು ಬಿಜೆಪಿ ಪ್ರಶ್ನಿಸಿದೆ.

‘ಕಾಂಗ್ರೆಸ್‍ ಮುಕ್ತ ಭಾರತ್’ ಎಂಬ ಹ್ಯಾಷ್‍ಟ್ಯಾಗ್‍ನೊಂದಿಗೆ ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ಕಾಂಗ್ರೆಸ್ ಪಕ್ಷದ ಸಾಧನೆಯನ್ನು ಪ್ರಶ್ನೆ ಮಾಡಿದೆ. “ಪಂಚರಾಜ್ಯಗಳ ಚುನಾವಣೆಯಲ್ಲಿ ಪಕ್ಷದ ಸಂಘಟನೆ ದುರ್ಬಲವಾಗಿದೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ ಚುನಾವಣೆ ಉಸ್ತುವಾರಿ ಹೊತ್ತಿರುವ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ದುರ್ಬಲರಾಗಿದ್ದಾರೆ ಎಂದು ಹೇಳುವ ಧೈರ್ಯವನು ಸಿದ್ದರಾಮಯ್ಯ ಹೊಂದಿಲ್ಲ. ರಾಜ್ಯದಲ್ಲೇ ಗೆಲ್ಲದವರು, ಪ್ರಧಾನಿಯಾಗುವ ಕನಸು ಕಾಣುತ್ತಿರುವುದು ಮೂರ್ಖತನವಲ್ಲವೇ..?” ಎಂದು ಕಿಡಿಕಾರಿದೆ.


ಪಂಜಾಬ್ ಮಾದರಿಯಲ್ಲಿಯೇ ರಾಜ್ಯದಲ್ಲಿಯೂ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಲಿದೆ. ಡಿಕೆಶಿ-ಸಿದ್ದು ಒಳಜಗಳದಿಂದ 2023ರ ನಂತರವೂ ಕಾಂಗ್ರೆಸ್ ರಾಜ್ಯದಲ್ಲಿ ವಿಪಕ್ಷ ಸ್ಥಾನವನ್ನೇ ಭದ್ರಪಡಿಸಿಕೊಳ್ಳಲಿದೆ. ಬಿಜೆಪಿ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ವ್ಯಂಗ್ಯವಾಡಿದೆ. ಇನ್ನು ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ಹೊರಬಿದ್ದ ನಂತರ ಕಾಂಗ್ರೆಸ್ ಪಾಳಯದಲ್ಲಿ ಅಸಮಾಧಾನ ಭುಗಿಲೆದ್ದಿದೆ. ರಾಷ್ಟ್ರೀಯ ನಾಯಕತ್ವದ ಬಗ್ಗೆ ಮತ್ತೆ ಅಸಮಾಧಾನ ಕೂಗಿ ಕೇಳಿಬರುತ್ತಿದೆ. ಜಿ-23 ನಾಯಕರು ನಾಯಕತ್ವದ ಬದಲಾವಣೆಯ ಕುರಿತು ನಾವೆಲ್ಲಾ ಗಂಭೀರವಾಗಿ ಯೋಚಿಸಬೇಕಿದೆ ಎಂದಿದ್ದಾರೆ.

ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ನಾಯಕತ್ವದಲ್ಲಿ ಪಕ್ಷ ದಿನದಿಂದ ದಿನಕ್ಕೆ ಕುಗ್ಗುತ್ತಿದೆ. ಹೀಗಾಗಿ ಪರ್ಯಾಯ ನಾಯಕತ್ವ ಕಂಡುಕೊಳ್ಳುವುದು ಅನಿವಾರ್ಯ ಎಂಬ ಮಾತುಗಳು ಪಕ್ಷದ ಆಂತರಿಕ ವಲಯದಲ್ಲೇ ಕೇಳಿಬರುತ್ತಿವೆ. ಗಾಂಧಿ ಮನೆತನದ ಹೊರತಾದ ನಾಯಕತ್ವಕ್ಕಾಗಿ ಕೆಲ ನಾಯಕರು ಆಗ್ರಹಿಸುತ್ತಿದ್ದಾರೆ. ಆದರೆ ಅದು ಅಷ್ಟು ಸುಲಭವಿಲ್ಲ. ಸದ್ಯ ಪರಿಸ್ಥಿತಿಯಲ್ಲಿ ಪ್ರಿಯಾಂಕಾ ಗಾಂಧಿಗೆ ಪಕ್ಷದ ಸಾರಥ್ಯ ವಹಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಆದರೆ 2019 ರಿಂದ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಿಯಾಂಕಾ ಗಾಂಧಿಯೂ ಮತದಾರರನ್ನು ಸೆಳೆಯುವಲ್ಲಿ ಸೋತಿದ್ದಾರೆ.

ಹೀಗಾಗಿ ಅವರಿಗೆ ಪಟ್ಟ ಕಟ್ಟಿದರು ಪ್ರಯೋಜನವಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಬಲಗೊಳ್ಳಲು ಯಾವ ದಾರಿ ಕಂಡುಕೊಳ್ಳಲಿದೆ ಮತ್ತು ಗಾಂಧಿ ಮನೆತನದ ಹೊರತಾದ ನಾಯಕತ್ವ ಕಾಂಗ್ರೆಸ್‍ನಲ್ಲಿ ಉದಯವಾಗಲಿದೆಯೇ..? ಎಂಬುದನ್ನು ಕಾದುನೋಡಬೇಕಿದೆ.

Exit mobile version