ಸಿದ್ದರಾಮಯ್ಯ ಅವರಿಗೆ ಸಿಎಂ ಕುರ್ಚಿ ಕಾಣುತ್ತಿದೆ ಹೊರತು ಅಭಿವೃದ್ಧಿ ಕಾಣುತ್ತಿಲ್ಲ: ಶ್ರೀರಾಮುಲು ಕಿಡಿ

ಗದಗ, ಫೆ. 12: ರಾಜ್ಯ ಸರ್ಕಾರ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿದೆ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿರುವ ಸಚಿವ ಬಿ.ಶ್ರೀರಾಮುಲು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಎಲ್ಲ ಕ್ಷೇತ್ರಕ್ಕೆ ಅನುದಾನ ನೀಡಿದ್ದು, ಸಿದ್ದರಾಮಯ್ಯರಿಗೆ ಸಿಎಂ ಖುರ್ಚಿ ಕಾಣುತ್ತಿದೆಯೇ ಹೊರತು, ಅಭಿವೃದ್ಧಿ ಕಾಣುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಗದಗದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರವು ಎಲ್ಲ ಕ್ಷೇತ್ರಗಳಿಗೂ ಸಮಾನವಾಗಿ ಅನುದಾನ ಹಂಚಿಕೆ ಮಾಡಿದೆ. ಹಾಗಾಗಿಯೇ ಇಂದು ಸಿದ್ದರಾಮಯ್ಯ ಅವರ ಕ್ಷೇತ್ರವಾದ ಬಾದಾಮಿಯಲ್ಲಿ ನಾನು ಮತ್ತು ಅವರು ಅಂಬೇಡ್ಕರ್ ವಸತಿ ಶಾಲೆಗೆ ಶಂಕುಸ್ಥಾಪನೆ ನೆರವೇರಿಸುತ್ತಿದ್ದೇವೆ. ಇದಕ್ಕೆ 19.5 ಕೋಟಿ ರೂ. ವ್ಯಯಿಸಲಾಗುತ್ತದೆ.

ಆದರೆ, ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಸಿದ್ದರಾಮಯ್ಯ ಅವರು ಹೇಳುತ್ತಾರೆ. ಅವರು ಸಿಎಂ ಆಗಿದ್ದಾಗ ಯಾವುದೇ ಪ್ರಾಕೃತಿಕ ವಿಕೋಪ ಸಂಭವಿಸಲಿಲ್ಲ. ಆದರೆ ನೆರೆ, ಕೊರೋನಾದಂತಹ ಸಮಯದಲ್ಲೂ ಸಿಎಂ ಯಡಿಯೂರಪ್ಪ ಅವರು ಎಲ್ಲ ಕ್ಷೇತ್ರಕ್ಕೆ ಅನುದಾನ ನೀಡಿದ್ದಾರೆ. ಸಿದ್ದರಾಮಯ್ಯರಿಗೆ ಸಿಎಂ ಖುರ್ಚಿ ಕಾಣುತ್ತಿದೆಯೇ ಹೊರತು, ಅಭಿವೃದ್ಧಿ ಕಾಣುತ್ತಿಲ್ಲ.
ನಮ್ಮ ಸರ್ಕಾರ ಎಂದಿಗೂ ಅಭಿವೃದ್ಧಿಯ ಪರವಾಗಿದ್ದು, ಇದಕ್ಕೆ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ನಮ್ಮ ಪಕ್ಷ ಗೆದ್ದಿದ್ದೇ ಸಾಕ್ಷಿಯಾಗಿದೆ. ಮುಂಬರುವ ಮಸ್ಕಿ ಹಾಗೂ ಬಸವಕಲ್ಯಾಣ ಕ್ಷೇತ್ರಗಳ ಉಪಚುನಾವಣೆಯಲ್ಲೂ ಅಭೂತಪೂರ್ವ ಗೆಲುವು ಸಾಧಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಇತ್ತೀಚೆಗೆ ಸಿದ್ದರಾಮಯ್ಯ ಅವರು ಪಕ್ಷದಲ್ಲಿ ನೆಲೆ ಕಳೆದುಕೊಳ್ಳುತ್ತಿದ್ದಾರೆ. ಅವರ ಸಮಾಜದಲ್ಲೇ ಅವರಿಗೆ ಬೆಲೆ ಇಲ್ಲದಂತಾಗಿದೆ. ಹಾಗಾಗಿ ‘ಹಿಂದ’ ಅಂತೆಲ್ಲ ಮಾತಾಡಿಕೊಂಡು ತಿರುಗಾಡುತ್ತಿದ್ದಾರೆ ಎಂದು ಟೀಕಿಸಿದರು. ಅಲ್ಲದೇ, ಕುರುಬ ಸಮುದಾಯವನ್ನು ಎಸ್ಟಿಗೆ, ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸಬೇಕು ಎಂದು ಹೋರಾಟ ನಡೆಯುತ್ತಿದೆ. ಸಮಾಜ ಕಲ್ಯಾಣ ಇಲಾಖೆಯಿಂದ 26 ಜಿಲ್ಲೆಯಲ್ಲಿ ಸರ್ವೇ ನಡೆಯುತ್ತಿದ್ದು, ವರದಿ ಬಂದ ಕೂಡಲೇ ಸಿಎಂ ಯಡಿಯೂರಪ್ಪ ಅವರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

Exit mobile version