ಸಿದ್ದು ಕೋಲಾರದಿಂದ ಸ್ಪರ್ಧೆ ; ತೆರೆಮರೆಯಲ್ಲಿ ದಳಪತಿಗಳ ಲೆಕ್ಕಾಚಾರ

Kolara : ಸಾಕಷ್ಟು ಅಳೆದು-ತೂಗಿ, ಮೂರು ಹಂತಗಳಲ್ಲಿ ಸಮೀಕ್ಷೆ ನಡೆಸಿ ಇದೀಗ ಅಂತಿಮವಾಗಿ ಮಾಜಿ ಸಿಎಂ ಸಿದ್ದರಾಮಯ್ಯನವರು (Siddaramaiah Kolara Yathra) ಮುಂಬರುವ ವಿಧಾನಸಭಾ ಚುನಾವಣೆಗಾಗಿ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಘೋಷಿಸಿದ್ದಾರೆ.

ಈ ಕುರಿತು ಅಧಿಕೃತವಾಗಿ ಸಿದ್ದರಾಮಯ್ಯ ಅವರು ಘೋಷಣೆ ಮಾಡುತ್ತಿದ್ದಂತೆ, ಇನ್ನೊಂದೆಡೆ ದಳಪತಿಗಳು ತಮ್ಮ ರಾಜಕೀಯ ದಾಳ ಉರುಳಿಸಲು ತೆರೆಮರೆಯಲ್ಲಿ ಭಾರೀ ತಯಾರಿಯನ್ನೇ ನಡೆಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಸಿದ್ದರಾಮಯ್ಯನವರು ಕೋಲಾರದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಸುದ್ದಿ ಹರಿದಾಡುತ್ತಿರುವಾಗಲೇ ಜೆಡಿಎಸ್‌ (JDS) ನಾಯಕರು,

ಕೋಲಾರ ಕ್ಷೇತ್ರದಲ್ಲಿ ರೂಪಿಸಬೇಕಾದ ರಣತಂತ್ರದ ಕುರಿತು ಚರ್ಚೆ ನಡೆಸಿದ್ದರು ಎನ್ನಲಾಗಿದೆ.

ನಮ್ಮ ಪಕ್ಷದಲ್ಲಿ ಅಭ್ಯರ್ಥಿ ಆಯ್ಕೆಗೆ ಒಂದು ಪ್ರಕ್ರಿಯೆ ಇದೆ, ನಾನು ಸ್ಪರ್ಧೆ ಬಗ್ಗೆ ತಿಳಿಸಿದ್ದೇನೆ ಆದರೆ ನನ್ನ ತೀರ್ಮಾನಕ್ಕೆ ಕಾಂಗ್ರೆಸ್ (Siddaramaiah Kolara Yathra) ಹೈಕಮಾಂಡ್ ಒಪ್ಪಿಗೆ ನೀಡಬೇಕಾಗಿದೆ.

ನಾನೇ ಏಕಾಂಗಿಯಾಗಿ ಘೋಷಣೆ ಮಾಡಲು ಸಾಧ್ಯವಿಲ್ಲ.

ಪಕ್ಷದಲ್ಲಿ ನನಗೆ ಅಂತ ವಿಶೇಷ ನೀತಿ ಇಲ್ಲ, ಎಲ್ಲರಂತೆ ನಾನು ಕೂಡ ಈ ಪಕ್ಷದಲ್ಲಿ ಒಬ್ಬನಾಗಿದ್ದು ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು ಸಿದ್ದರಾಮಯ್ಯನವರು ತಿಳಿಸಿದರು.

ಇದನ್ನೂ ಓದಿ : https://vijayatimes.com/no-bjp-party-in-kolar/

ಖುದ್ದು ಕುಮಾರಸ್ವಾಮಿ (H.D.Kumaraswamy) ಅವರೇ ಕೋಲಾರ ಕ್ಷೇತ್ರದ ಬಗ್ಗೆ ವಿಶೇಷ ಆಸಕ್ತಿ ವಹಿಸಲು ನಿರ್ಧಿರಿಸಿದ್ದಾರೆ. ಕೋಲಾರದಲ್ಲಿ ಜೆಡಿಎಸ್‌ ತನ್ನದೇ ಆದ ಮತಬ್ಯಾಂಕ್‌ ಹೊಂದಿದೆ.

ಹೀಗಾಗಿ ಸಿದ್ದರಾಮಯ್ಯನವರನ್ನು ಶತಾಯಗತಾಯ ಸೋಲಿಸಲು ದಳಪತಿಗಳು ಸಿದ್ದತೆ ನಡೆಸಿದ್ದಾರೆ.

ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದಿನಿಂದಲೂ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ನೇರ ಹಣಾಹಣಿ ನಡೆದಿದೆ.

2018ರಲ್ಲಿ ಜೆಡಿಎಸ್‌ನ ಕೆ. ಶ್ರೀನಿವಾಸ ಗೌಡ 82,788 ಮತಗಳನ್ನು ಪಡೆದು, ಕಾಂಗ್ರೆಸ್‌ ಪಕ್ಷದ ಸೈಯದ್ ಜಮೀರ್ ಪಾಶಾ (Syed Zameer Pasha) ಅವರನ್ನು 44,251 ಮತಗಳ ಅಂತರದಿಂದ ಸೋಲಿಸಿದ್ದರು.

ಆದರೆ ಇದೀಗ ಹಾಲಿ ಜೆಡಿಎಸ್‌ ಶಾಸಕ ಕೆ.ಶ್ರೀನಿವಾಸಗೌಡ (K.Shrinivas Gowda) ಕಾಂಗ್ರೆಸ್‌ ಪಕ್ಷಕ್ಕೆ ಸೇರಲು ತಯಾರಿ ನಡೆಸಿದ್ದಾರೆ.

ಹೀಗಾಗಿ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಸಿದ್ದರಾಮಯ್ಯನವರಿಗೆ ಸೋಲಿನ ರುಚಿ ತೋರಿಸಲು ಜೆಡಿಎಸ್‌ ತಯಾರಿ ನಡೆಸಿದೆ.

ಇನ್ನು ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ 40,000ದಷ್ಟು ಒಕ್ಕಲಿಗ ಮತದಾರರಿದ್ದು, 39 ಸಾವಿರ ಹಿಂದುಳಿದ ವರ್ಗದ ಮತಗಳಿವೆ.

ಸುಮಾರು 60 ಸಾವಿರ ಪರಿಶಿಷ್ಟ ಜಾತಿ ಮತ್ತು ಪಂಗಡದ ಮತದಾರರಿದ್ದಾರೆ. ಇನ್ನೊಂದೆಡೆ 51 ಸಾವಿರ ಮುಸ್ಲಿಮರು ಮತ್ತು 29 ಸಾವಿರ ಕುರುಬ ಮತದಾರರಿದ್ದಾರೆ.

ಹೀಗಾಗಿ ಸಿದ್ದರಾಮಯ್ಯನವರಿಗೆ ಈ ಕ್ಷೇತ್ರದಲ್ಲಿ ಪ್ರಬಲ ಸ್ಪರ್ಧೆ ನೀಡಬಹುದು ಎಂಬುದು ಜೆಡಿಎಸ್‌ ನಾಯಕರ ಲೆಕ್ಕಾಚಾರ.

ಈಗಾಗಲೇ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಜಿದ್ದಾಜಿದ್ದಿನ ಪೈಪೋಟಿ ಶುರುವಾಗಿದೆ. ಚುನಾವಣೆಯಲ್ಲಿ ಸ್ಪರ್ಧೆಗಾಗಿ ಹಲವು ಕಸರತ್ತುಗಳನ್ನು ನಡೆಸುತ್ತಿದ್ದಾರೆ.

ಹಾಗೆಯೇ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯ ಮುನ್ನವೇ ಕ್ಷೇತ್ರವನ್ನು ಆಯ್ಕೆ ಮಾಡುವ ಮೂಲಕ ಸಿದ್ದರಾಮಯ್ಯನವರು ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ರಾಜ್ಯ ರಾಜಕೀಯ ವಲಯದ ಗಮನ ಕೋಲಾರ ಕ್ಷೇತ್ರದತ್ತ ತಿರುಗಲಿದೆ.

ಸಿದ್ದರಾಮಯ್ಯನವರ ಈ ನಿರ್ಧಾರದಿಂದ ಬಿಜೆಪಿ ಹಾಗೂ ಜೆಡಿಎಸ್ ನ ಮುಂದಿನ ತೀರ್ಮಾನ ಏನಾಗಿರಬಹುದು ಎನ್ನುವುದೇ ಇದೀಗ ಕುತೂಹಲಕ್ಕೆ ಕಾರಣವಾಗಿದೆ.

Exit mobile version