ಜನತಾ ಜನಾರ್ದನರ ಪ್ರೀತಿ-ಅಭಿಮಾನಕ್ಕೆ ತುಂಬು ಹೃದಯದ ಕೃತಜ್ಞತೆಗಳು : ಸಿದ್ದರಾಮಯ್ಯ

Congress

ನನ್ನ ಜನ್ಮದಿನದ ಅಮೃತ ಮಹೋತ್ಸವಕ್ಕೆ(Amritha Mahotsav) ಶುಭ ಕೋರಿದ ನನ್ನೆಲ್ಲಾ ಹಿತೈಷಿಗಳಿಗೆ, ಅಭಿಮಾನಿಗಳಿಗೆ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಅನಂತ ಧನ್ಯವಾದಗಳು. ತಾವು ತೋರಿದ ಪ್ರೀತಿ, ಅಭಿಮಾನ ಈ ದಿನವನ್ನು ಅವಿಸ್ಮರಣೀಯವಾಗಿಸಿದೆ. ದಾವಣಗೆರೆಯಲ್ಲಿ(Davangere) ಇಂದು ನಡೆದ ನನ್ನ ಹುಟ್ಟು ಹಬ್ಬದ ಸಮಾರಂಭಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಬಂದಿರುವ ಜನತಾ ಜನಾರ್ದನರ ಪ್ರೀತಿ-ಅಭಿಮಾನಕ್ಕೆ ತುಂಬು ಹೃದಯದ ಕೃತಜ್ಞತೆಗಳು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಹೇಳಿದ್ದಾರೆ.


ಈ ಕುರಿತು ಸರಣಿ ಟ್ವೀಟ್‌(Tweet) ಮಾಡಿರುವ ಅವರು, ದಾವಣಗೆರೆಯಲ್ಲಿ ಇಂದು ನಡೆದ ನನ್ನ ಹುಟ್ಟುಹಬ್ಬದ ಸಮಾರಂಭವನ್ನು ವರದಿ ಮಾಡಲು ಬಂದಿರುವ ಸಮಸ್ತ ಪತ್ರಕರ್ತ ಬಂಧುಗಳಿಗೆ ಧನ್ಯವಾದಗಳು. ವೈ-ಫೈ ಸಮಸ್ಯೆಯೂ ಸೇರಿದಂತೆ ಆಗಿರುವ ಅನಾನುಕೂಲತೆಗಳಿಗಾಗಿ ವಿಷಾದಿಸುತ್ತೇನೆ ಎಂದಿದ್ದಾರೆ.
ನನ್ನ ಹುಟ್ಟುಹಬ್ಬದ ಸಮಾರಂಭಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಸ್ವಂತ ಖರ್ಚಿನಲ್ಲಿ ವಾಹನಗಳನ್ನು ವ್ಯವಸ್ಥೆ ಮಾಡಿಕೊಂಡು ಬಂದಿದ್ದಾರೆ. ವಾಹನ ದಟ್ಟಣೆಯಿಂದಾಗಿ ಮುಖ್ಯವಾಗಿ ಉತ್ತರ ಕರ್ನಾಟಕದಿಂದ ಬಂದಿರುವ ಬಂಧುಗಳು ಸಮಾರಂಭದ ಸ್ಥಳಕ್ಕೆ ಬರಲಾಗದೆ ವಾಪಸು ಹೋಗಿದ್ದಾರೆ.

ಇದಕ್ಕಾಗಿ ನಾನು ವಿಷಾದಿಸುತ್ತೇನೆ, ಪ್ರೀತಿ ಇರಲಿ. ಇಂದಿನ ನನ್ನ ಜನ್ಮದಿನದ ಅಮೃತ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡವರ ಅನುಕೂಲಕ್ಕಾಗಿ ಸಂಘಟಕರು ಶಕ್ತಿಮೀರಿ ವ್ಯವಸ್ಥೆಯನ್ನು ಮಾಡಿದ್ದರೂ, ಲಕ್ಷಾಂತರ ಜನರ ಭಾಗವಹಿಸುವಿಕೆಯಿಂದಾಗಿ ಸಹಜವಾಗಿ ಒಂದಷ್ಟು ಅನಾನುಕೂಲವಾಗಿರಬಹುದು. ಅದಕ್ಕಾಗಿ ಕ್ಷಮೆ ಇರಲಿ. ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ, ಯಶಸ್ವಿಯಾಗಿ ಅಯೋಜಿಸಿದ್ದ ಸಂಘಟನಾ ಸಮಿತಿಯ ಎಲ್ಲ ಪದಾಧಿಕಾರಿಗಳಿಗೆ ನಾನು ಕೃತಜ್ಞ. ನಿಮ್ಮೆಲ್ಲರ ಶ್ರಮಕ್ಕೆ ಸಾಗರದಂತೆ ಹರಿದುಬಂದ ಜನಸ್ತೋಮವೇ ಸಾಕ್ಷಿ ಎಂದಿದ್ದಾರೆ.


ಇಂದಿನ ಅಮೃತ ಮಹೋತ್ಸವ ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿಗೆ ಕಾರಣ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿ, ಸಂತಸದ ಕ್ಷಣದಲ್ಲಿ ನನ್ನೊಂದಿಗೆ ಭಾಗಿಯಾದ ನನ್ನೆಲ್ಲಾ ಸಹೃದಯಿ ಮಿತ್ರರು. ತಮ್ಮ ಪ್ರೀತಿಗೆ ನಾನು ಚಿರಋಣಿ. ದಾವಣಗೆರೆಯಲ್ಲಿ ನಡೆದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿ, ಶುಭಕೋರಿದ ನಮ್ಮ ನಾಯಕರಾದ ರಾಹುಲ್‌ ಗಾಂಧಿ(Rahul Gandhi) ಅವರಿಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮತ್ತು ಪಕ್ಷದ ಪದಾಧಿಕಾರಿಗಳು, ಶಾಸಕರು ಮತ್ತು ಮಾಜಿ ಶಾಸಕರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.

Exit mobile version