ವಾರಣಾಸಿಯಲ್ಲಿ ರೇಷ್ಮೆ ಮಾರುಕಟ್ಟೆ ತೆರೆಯಲು ಕರ್ನಾಟಕ ಸರ್ಕಾರ ನಿರ್ಧಾರ

ವಾರಣಾಸಿ ನ 18 : ವಾರಣಾಸಿಗೂ ಕರ್ನಾಟಕ ನಡುವಿನ ರೇಷ್ಮೆ ಬಾಂಧವ್ಯಕ್ಕೆ ಮತ್ತೆ ಮರುಜೀವ ಸಿಕ್ಕಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದ್ದಾರೆ‌.

ವಾರಣಾಸಿಯ ಬನಾರಸ್ ವಿಶ್ವವಿದ್ಯಾಲಯದಲ್ಲಿ ಇಂದು ಉತ್ತರ ಪ್ರದೇಶದ ರೇಷ್ಮೆ ಇಲಾಖೆ, ಟೆಕ್ಸ್‌ಟೈಲ್ ಇಲಾಖೆ ಅಧಿಕಾರಿಗಳು, ರೀಲರ್ಸ್‌ಗಳ ಜೊತೆ ಸಚಿವ ಡಾ.ನಾರಾಯಣಗೌಡ ಸಭೆ ನಡೆಸಿದರು. ಕರ್ನಾಟಕ ರೇಷ್ಮೆ ಗುಣಮಟ್ಟ, ಪೂರೈಕೆ ಹಾಗೂ ರೇಷ್ಮೆ ಮಾರಾಟಕ್ಕೆ ಸಂಬಂಧಿಸಿದಂತೆ ಕರ್ನಾಟಕ ಕೈಗೊಂಡಿರುವ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಕರ್ನಾಟಕದ ರೇಷ್ಮೆ ಮಾರುಕಟ್ಟೆ ವ್ಯವಸ್ಥೆ ಹಾಗೂ ರೇಷ್ಮೆ ಬೆಳೆಗಾರರಿಗೆ‌ ಹೆಚ್ಚಿನ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮಾರುಕಟ್ಟೆ ವಿಸ್ತರಿಸಲು ಕ್ರಮಕೈಗೊಂಡಿರುವ ಕ್ರಮಗಳ ಬಗ್ಗೆ ಸಚಿವ ಡಾ.ನಾರಾಯಣಗೌಡ ಅವರು ವಿವರಿಸಿದರು.

ವಾರಣಾಸಿಯಲ್ಲಿ ರೇಷ್ಮೆಗೆ ಹೆಚ್ಚಿನ ಬೇಡಿಕೆ ಇದೆ. ಸದ್ಯ ಚೀನಾದಿಂದ ರೇಷ್ಮೆ ಆಮದು ಸ್ಥಗಿತಗೊಳಿಸಲಾಗಿದೆ. ಕರ್ನಾಟಕವು ಕಚ್ಚಾ ರೇಷ್ಮೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ಹೆಚ್ಚಿನ ಸ್ವಯಂ ಚಾಲಿತ ರೀಲಿಂಗ್ ಯಂತ್ರ(ಎಂಆರ್‌ಎಂ)ಗಳನ್ನು ಹೊಂದಿದ್ದು ಅತ್ಯುತ್ತಮ ತಂತ್ರಜ್ಞಾನದೊಂದಿಗೆ ಗುಣಮಟ್ಟದ ಬೈವೊಲ್ಟಿನ್ ದಾರವನ್ನು ಉತ್ಪಾದಿಸುತ್ತಿದೆ. ಇದು ಚೀನಾ ರೇಷ್ಮೆಗಿಂತಲೂ ಉತ್ತಮವಾಗಿದೆ ಎಂದು ಸಚಿವರು ತಿಳಿಸಿದರು.

ಕರ್ನಾಟಕದಲ್ಲಿ ಮೈಸೂರು ಸಿಲ್ಕ್ ನಂತೆಯೇ ಉತ್ತರ ಪ್ರದೇಶದ ಬನರಾಸ್ ಸೀರೆ ಪ್ರಸಿದ್ಧಿಯಾಗಿದೆ. ವಾರಣಾಸಿಯ ಬನಾರಸ್‌ಗೂ ಕರ್ನಾಟಕಕ್ಕೂ ಅವಿನಾವಭಾವ ಸಂಬಂಧವಿದೆ. 1997ರಲ್ಲೇ ಕೆಎಸ್‌ಎಂಬಿ ವತಿಯಿಂದ ವಾರಣಾಸಿಗೆ ಕರ್ನಾಟಕದ ರೇಷ್ಮೆ ಪೂರೈಸಲಾಗುತ್ತಿತ್ತು. ಆದರೆ, ಕಾರಣಾಂತರಗಳಿಂದ 2003ರಿಂದ ವಾರಣಾಸಿಗೆ ರೇಷ್ಮೆ ಸರಬರಾಜು ಸ್ಥಗಿತಗೊಳಿಸಲಾಗಿತ್ತು. ಆದರೆ ಈಗ ಮತ್ತೆ ವಾರಣಾಸಿಯಲ್ಲಿ ರೇಷ್ಮೆ ಮಾರುಕಟ್ಟೆ ಆರಂಭಿಸಲು ನಮ್ಮ ಸರ್ಕಾರ ನಿರ್ಧರಿಸಿದೆ‌. ಬನಾರಸ್ ನೇಕಾರರಿಗೆ ಅಗತ್ಯ ಇರುವ ಗುಣಮಟ್ಟದ ರೇಷ್ಮೆಯನ್ನು ಪೂರೈಸಲು ನಮ್ಮ ಸರ್ಕಾರ ಸಿದ್ಧವಾಗಿದೆ. ವಾರಣಾಸಿಯಲ್ಲಿ ನಮ್ಮ ಮಾರುಕಟ್ಟೆ/ ರೇಷ್ಮೆ ಬ್ಯಾಂಕ್ ಸ್ಥಾಪಿಸಲು ವ್ಯವಸ್ಥೆ ಕಲ್ಪಿಸಿ, ಕರ್ನಾಟಕ ಮತ್ತು ವಾರಣಾಸಿ ನಡುವಿನ ಹಳೇ ಸಂಬಂಧ ಮತ್ತೆ ವೃದ್ದಿಸಲು ಸಹಕರಿಸುವಂತೆ ಡಾ.ನಾರಾಯಣಗೌಡ ಅವರು ಮನವಿ ಮಾಡಿದರು

Exit mobile version