ಸ್ನೇಹ ರಾಣಾ ಸಾಹಸಮಯ ಬ್ಯಾಟಿಂಗ್: ಇಂಗ್ಲೆಂಡ್ ಹಾಗೂ ಭಾರತ ವನಿತೆಯರ ನಡುವಿನ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯ

ಬ್ರಿಸ್ಟಲ್,ಜೂ.21: ಸ್ನೇಹ ರಾಣಾ(80) ಹಾಗೂ ತಾನಿಯಾ ಭಾಟಿಯಾ (44) ಅವರ ಅದ್ಭುತ ಜೊತೆಯಾಟದಿಂದ ಅತಿಥೇಯ ಇಂಗ್ಲೆಂಡ್ ಹಾಗೂ ಭಾರತ ವನಿತೆಯರ ತಂಡಗಳ ನಡುವಿನ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು.

ಇಲ್ಲಿನ‌ ಕಂಟ್ರಿಗ್ರೌಂಡ್ ನಲ್ಲಿ ನಡೆದ ಪಂದ್ಯದ ನಾಲ್ಕನೇ ಹಾಗೂ ಕಡೆಯ ದಿನದಾಟದ ಪ್ರದರ್ಶನ ಉಭಯ ತಂಡಗಳ ಪಾಲಿಗೆ ನಿರ್ಣಾಯಕವಾಗಿತ್ತು. ಆದರೆ ಟೀಂ ಇಂಡಿಯಾ ಆಟಗಾರ್ತಿಯರ ಜವಾಬ್ದಾರಿಯ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ಪ್ರಮುಖವಾಗಿ ಸ್ನೇಹ ರಾಣಾ ಹಾಗೂ ತಾನಿಯಾ ಭಾಟಿಯ ಮುರಿಯದ 9ನೇ ವಿಕೆಟ್ ಜೊತೆಯಾಟದಲ್ಲಿ 104 ರನ್ ಕಲೆಹಾಕುವ ಮೂಲಕ ಟೀಂ ಇಂಡಿಯಾವನ್ನು ಸೋಲಿನಿಂದ ಪಾರು ಮಾಡುವಲ್ಲಿ ಯಶಸ್ವಿಯಾದರು.

ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ 9 ವಿಕೆಟ್ ನಷ್ಟಕ್ಕೆ 396 ರನ್ ಗಳಿಸಿ ತನ್ನ ಪ್ರಥಮ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ 231 ರನ್ ಗಳಿಗೆ ಆಲೌಟ್ ಆಗುವ ಮೂಲಕ 165 ರನ್ ಗಳ ಹಿನ್ನಡೆಯೊಂದಿಗೆ ಫಾಲೋ ಆನ್ ಸಂಕಷ್ಟಕ್ಕೆ ಸಿಲುಕಿತು. 2ನೇ ಇನ್ನಿಂಗ್ಸ್ ನಲ್ಲಿ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ಪ್ರಮುಖ ಆಟಗಾರ್ತಿಯರು ವೈಫಲ್ಯ ಅನುಭವಿಸಿದರು. ಪ್ರಮುಖ ಆಟಗಾರ್ತಿಯರಾದ ದೀಪ್ತಿ ಶರ್ಮಾ, ಮಿಥಾಲಿ ರಾಜ್ ಹಾಗೂ ಹರ್ಮನ್ಪ್ರೀತ್ ಕೌರ್ ಅವರುಗಳು ಒಬ್ಬರ ಹಿಂದೆ ಒಬ್ಬರಂತೆ ಔಟಾಗಿದ್ದು ಭಾರತ ತಂಡವನ್ನ ಸೋಲಿನ ಸಂಕಷ್ಟ‌ ಎದುರಾಯಿತು.

ಆದರೆ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ನೇಹ ರಾಣಾ, ತಂಡಕ್ಕೆ ಆಸರೆಯಾಗಿ ನಿಂತರು. 8ನೇ ವಿಕೆಟ್ಗೆ ಶಿಖಾ ಪಾಂಡೆ(18) ಅವರೊಂದಿಗೆ 41 ರನ್ಗಳ ಜೊತೆಯಾಟದ ಕಾಣಿಕೆ ನೀಡಿದರು. ಶಿಖಾ ಪಾಂಡೆ ವಿಕೆಟ್ ವಿಕೆಟ್ ಪತನದ ಬಳಿಕವೂ ಜಬಾವ್ದಾರಿಯುತ ಆಟ ಮುಂದುವರಿಸಿದ ಸ್ನೇಹ ರಾಣಾ, 9ನೇ ವಿಕೆಟ್ ಗೆ ತಾನಿಯಾ ಭಾಟಿಯಾ ಅವರ ಜೊತೆಗೂಡಿ ಅಜೇಯ 104 ರನ್ ಕಲೆಹಾಕುವ ಮೂಲಕ ತಂಡವನ್ನು ಸೋಲಿನಿಂದ ಪಾರು ಮಾಡಿದರು.

ಸ್ನೇಹ ರಾಣಾ(80) ಹಾಗೂ ತಾನಿಯಾ ಭಾಟಿಯಾ(44) ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ 179 ರನ್ಗಳ ಮುನ್ನಡೆಯೊಂದಿಗೆ 8 ವಿಕೆಟ್ ನಷ್ಟಕ್ಕೆ 334 ರನ್ಗಳಿಸಿದ್ದ ವೇಳೆ ಎರಡು ತಂಡಗಳ ಆಟಗಾರರ ಒಪ್ಪಿಗೆ ಮೇರೆಗೆ ಇನ್ನೂ 12 ಓವರ್ಗಳು ಬಾಕಿ ಇರುವಾಗಲೇ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ನಿರ್ಧರಿಸಲಾಯಿತು. ಚೊಚ್ಚಲ ಪಂದ್ಯದಲ್ಲೇ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಶೆಫಾಲಿ ವರ್ಮ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

Exit mobile version