ಹೀನಾಯ ಸೋಲಿಗೆ ಸಾಮಾಜಿಕ ಜಾಲತಾಣಗಳೇ ಕಾರಣ : ಸೋನಿಯಾ ಗಾಂಧಿ!

congress

ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿಗೆ ಸಾಮಾಜಿಕ ಜಾಲತಾಣಗಳೇ ನೇರ ಕಾರಣ. ಸಾಮಾಜಿಕ ಜಾಲತಾಣದಲ್ಲಿನ ಅಬ್ಬರ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಲೋಕಸಭೆಯಲ್ಲಿ ಹೇಳಿದರು. ಪಂಚರಾಜ್ಯ ಚುನಾವಣೆಯಲ್ಲಿ ನಮ್ಮ ಪಕ್ಷವೂ ಸಾಕಷ್ಟು ಹಿನ್ನಡೆಯನ್ನು ಅನುಭವಿಸಿದೆ. ಕಳೆದ ಬಾರಿಗಿಂತ ಈ ಬಾರಿ ನಾವು ಸಾಕಷ್ಟು ಮತಗಳನ್ನು ಎಲ್ಲ ರಾಜ್ಯಗಳಲ್ಲಿಯೂ ಕಳೆದುಕೊಂಡಿದ್ದೇವೆ. ಇದಕ್ಕೆ ಕಾರಣ ವಿಶ್ವದ ದೊಡ್ಡದೊಡ್ಡ ಸಾಮಾಜಿಕ ಜಾಲತಾಣಗಳು. ಈ ಸಾಮಾಜಿಕ ಜಾಲತಾಣಗಳ ಆಡಳಿತ ಮಂಡಳಿಯನ್ನು ಬಳಸಿಕೊಂಡು ಆಳುವ ಸರ್ಕಾರಗಳು ದ್ವೇಷ ಮತ್ತು ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಮೂಲಕ ವ್ಯವಸ್ಥೆಯನ್ನೇ ನಾಶ ಮಾಡುತ್ತಿವೆ.

ಸಾಮಾಜಿಕ ಜಾಲತಾಣಗಳು ದೇಶದ ರಾಜಕೀಯವನ್ನು ನಿರ್ಧರಿಸುವ ಮಟ್ಟಕ್ಕೆ ಬೆಳೆದಿವೆ. ಈ ಬೆಳವಣಿಗೆ ಪ್ರಜಾಪ್ರಭುತ್ವಕ್ಕೆ ಅತ್ಯಂತ ಅಪಾಯಕಾರಿ ಎಂದು ಸೋನಿಯಾ ಗಾಂಧಿ ತಮ್ಮ ಆಕ್ರೋಶ ಹೊರಹಾಕಿದರು. ಇನ್ನು ಸಾಮಾಜಿಕ ಜಾಲತಾಣಗಳು ಎಲ್ಲಾ ರಾಜಕೀಯ ಪಕ್ಷಗಳಿಗೆ ಸಮನಾದ ವೇದಿಕೆಯನ್ನು ನೀಡುತ್ತಿಲ್ಲ. ಆಳುವ ಸರ್ಕಾರದೊಂದಿಗೆ ಕೈಜೋಡಿಸಿ, ವಿಪಕ್ಷಗಳನ್ನು ಗುರಿಯಾಗಿಸಿಕೊಂಡು ದೈತ್ಯ ಕಂಪನಿಗಳು ಕೆಲಸ ಮಾಡುತ್ತಿವೆ. ದೇಶದ ಚುನಾವಣಾ ರಾಜಕೀಯದಲ್ಲಿ ಈ ಕಂಪನಿಗಳು ಹಸ್ತಕ್ಷೇಪ ಮಾಡುತ್ತಿವೆ.

ಈ ಬೆಳವಣಿಗೆ ಅತ್ಯಂತ ಕಳವಳಕಾರಿಯಾಗಿದೆ. ಇನ್ನು ಭಾವನಾತ್ಮಕ ವಿಷಯಗಳನ್ನು ಭಿತ್ತಿ ಯುವಜನತೆಯ ಮನಸ್ಸಿನಲ್ಲಿ ದ್ವೇಷ ತುಂಬಲಾಗುತ್ತಿದೆ. ಎಲ್ಲೆಡೆ ದ್ವೇಷವನ್ನು ಹರಡುವ ಸಂಚು ವ್ಯವಸ್ಥಿತವಾಗಿ ನಡೆಯುತ್ತಿದೆ. ಆ ಮೂಲಕ ದೇಶದಲ್ಲಿನ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರಲಾಗುತ್ತಿದೆ ಎಂದು ಹೆಸರು ಹೇಳದೆ ಬಿಜೆಪಿ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಇನ್ನು ಇತ್ತೀಚಿಗೆ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಕಂಡಿತ್ತು. ಪಂಜಾಬ್ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡರೆ, ಉತ್ತರಪ್ರದೇಶ, ಉತ್ತರಾಖಂಡ, ಮಣಿಪುರ ಮತ್ತು ಗೋವಾ ರಾಜ್ಯಗಳಲ್ಲಿ ಹೀನಾಯ ಸೋಲು ಕಂಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಸೋಲಿನ ಕುರಿತು ಸಾಕಷ್ಟು ವ್ಯಂಗ್ಯ ಕೇಳಿ ಬಂದಿತ್ತು. ಕಾಂಗ್ರೆಸ್ ಪಕ್ಷ ಇನ್ನು ನೇಪತ್ಯಕ್ಕೆ ಸರಿಯಲಿದೆ, ಕಾಂಗ್ರೆಸ್ ಇತಿಹಾಸದ ಪುಟ ಸೇರಲಿದೆ ಎಂದು ಅನೇಕರು ವ್ಯಂಗ್ಯವಾಡಿದ್ದರು.

Exit mobile version