ಜುಬೇರ್‍ಗೆ ಬೆಂಬಲ : ಎತ್ತ ಸಾಗುತ್ತಿದೆ ರಾಹುಲ್ ಗಾಂಧಿ ಆಲೋಚನೆ

Congress

ಟ್ವೀಟ್‍ಗಳ(Tweet) ಮೂಲಕ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ‘ಆಲ್ಟ್ ನ್ಯೂಸ್’ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್‍ನನ್ನು ದೆಹಲಿ ಪೊಲೀಸರು(Delhi Police) ಬಂಧಿಸಿದ್ದಾರೆ. ಅಚ್ಚರಿ ಎಂದರೆ ಜುಬೇರ್ ಬಂಧನವನ್ನು ಖಂಡಿಸಿರುವ ಕಾಂಗ್ರೆಸ್ ನಾಯಕ(Congress Leader) ರಾಹುಲ್ ಗಾಂಧಿ(Rahul Gandhi), ಜುಬೇರ್ ಜೊತೆಗೆ ನಾವಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.

ದೆಹಲಿ ಪೊಲೀಸರು ಆರೋಪಿ ಮೊಹಮ್ಮದ್ ಜುಬೇರ್ ಮೇಲೆ ಐಪಿಸಿ ಸೆಕ್ಷನ್153ಎ (ಧಾರ್ಮಿಕ, ಜನಾಂಗೀಯ, ಹುಟ್ಟಿದ ಸ್ಥಳ, ಭಾಷೆಯ ಹಿನ್ನಲೆಯಲ್ಲಿ ಭಿನ್ನ ಗುಂಪುಗಳ ನಡುವೆ ದ್ವೇಷ ಹರಡುವುದು) ಮತ್ತು 295ಎ (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಉದ್ದೇಶಪೂರ್ವಕವಾಗಿ ನಡೆಸಿದ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹಿಂದೂ ದೇವರುಗಳನ್ನು ಅವಹೇಳನ ಮಾಡುವವನು ರಾಹುಲ್ ಗಾಂಧಿ ಅವರಿಗೆ ‘ಸತ್ಯದ ಧ್ವನಿ’ಯಾಗಿ ಕಾಣುತ್ತಾನೆ. ಬಿಜೆಪಿ ಸರ್ಕಾರ ಸತ್ಯವನ್ನು ಹತ್ತಿಕ್ಕುತ್ತಿದೆ ಎಂದು ಆರೋಪಿಸಿ, ಮೊಹಮ್ಮದ್ ಜುಬೇರ್‍ಗೆ ರಾಹುಲ್ ಗಾಂಧಿ ಬೆಂಬಲ ನೀಡಿದ್ದಾರೆ.

ಆದರೆ ರಾಹುಲ್ ಗಾಂಧಿಯವರು ಒಮ್ಮೆ ಜುಬೇರ್ ಮಾಡಿರುವ ಟ್ವೀಟ್‍ಗಳನ್ನು ಓದಿದರೆ ಸತ್ಯದ ಅರಿವಾಗುತ್ತದೆ. ಹಿಂದೂ ದೇವರುಗಳನ್ನು ಅವಹೇಳನ ಮಾಡುವ ಜುಬೇರ್ ಹೇಳಿಕೆ ರಾಹುಲ್ ಗಾಂಧಿಯವರಿಗೆ ಸತ್ಯದಂತೆ ಕಾಣುತ್ತದೆ. ಆದರೆ ಇಸ್ಲಾಮಿಕ್ ಧಾರ್ಮಿಕ ಗ್ರಂಥದಲ್ಲೇ ಉಲ್ಲೇಖವಾಗಿರುವ ಸತ್ಯವನ್ನು ಹೇಳಿದ ನೂಪುರ್ ಶರ್ಮಾ(Nupur Sharma) ಹೇಳಿಕೆ ಅವಹೇಳನವಾಗುತ್ತದೆ. ರಾಹುಲ್ ಗಾಂಧಿಯವರು ಯಾವುದೇ ವಿಷಯದ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಂಡು, ಆಲೋಚಿಸಿ, ಪ್ರಬುದ್ದತೆಯಿಂದ ಮಾತನಾಡುವುದು ಉತ್ತಮ.

ರಾಷ್ಟ್ರೀಯ ಪಕ್ಷವೊಂದರ ಮಾಜಿ ಅಧ್ಯಕ್ಷರಾಗಿರುವ ಅವರು, ಯಾವುದೇ ವಿಷಯಕ್ಕೆ ಬೆಂಬಲ ನೀಡುವ ಮುನ್ನ ಸತ್ಯವನ್ನು ತಿಳಿದುಕೊಳ್ಳುವುದು ಅತ್ಯವಶ್ಯಕ. ಮೊಹಮ್ಮದ್ ಜುಬೇರ್‍ನ ಟ್ವೀಟರ್ ಖಾತೆಯನ್ನು ಒಮ್ಮೆ ಕಣ್ಣಾಡಿಸಿದರೆ ರಾಹುಲ್ ಗಾಂಧಿಯವರಿಗೆ ಸತ್ಯದ ಅರ್ಥವಾಗುತ್ತದೆ. ಬಿಜೆಪಿಯನ್ನು ವಿರೋಧಿಸುವ ಏಕೈಕ ಉದ್ದೇಶದಿಂದ ಮೊಹಮ್ಮದ್ ಜುಬೇರ್‍ನಂತ ಅಪ್ರಬುದ್ದರನ್ನು ಬೆಂಬಲಿಸುವ ಮೂಲಕ ರಾಹುಲ್ ಗಾಂಧಿ ನೈತಿಕವಾಗಿ ಬೆತ್ತಲಾಗಿದ್ದಾರೆ. ಸತ್ಯವನ್ನೇ ಹೇಳಿದ ನೂಪುರ್ ಶರ್ಮಾಗೆ ಇಲ್ಲದ ಬೆಂಬಲ, ಹಿಂದೂ ದೇವರುಗಳನ್ನು ಅವಹೇಳನ ಮಾಡಿದ ಜುಬೇರ್‍ಗೆ ನೀಡುವ ರಾಹುಲ್ ಗಾಂಧಿ ನಡೆ ರಾಜಕೀಯ ಪ್ರೇರಿತ.

ವಿಷಯ ಕೇಂದ್ರಿತವಾಗಿ ನೀಡಬೇಕಾದ ಬೆಂಬಲವನ್ನು, ವ್ಯಕ್ತಿ ಕೇಂದ್ರಿತವಾಗಿ ನೀಡುತ್ತಿರುವುದು ಖಂಡನೀಯ. ರಾಹುಲ್ ಗಾಂಧಿಯವರು ಕೂಡಲೇ ಮೊಹಮ್ಮದ್ ಜುಬೇರ್‍ಗೆ ನೀಡಿರುವ ಬೆಂಬಲವನ್ನು ಮರುಪರಿಶೀಲನೆ ಮಾಡುವುದು ಒಳಿತು.

Exit mobile version