ಹಸರಂಗ ಸ್ಪಿನ್ ದಾಳಿಗೆ ಟೀಂ ಇಂಡಿಯಾ ತತ್ತರ: 3ನೇ ಟಿ20 ಪಂದ್ಯದಲ್ಲಿ ಶ್ರೀಲಂಕಾಕ್ಕೆ ಜಯ: ಅತಿಥೇಯರ ಮುಡಿಗೆ ಟಿ20 ಸರಣಿ

ಕೊಲಂಬೊ, ಜು. 30: ಯುವ ಲೆಗ್ ಸ್ಪಿನ್ನರ್ ವನಿಂದು ಹಸರಂಗ ಆಕ್ರಮಣಕಾರಿ ಬೌಲಿಂಗ್‌ ನೆರವಿನಿಂದ ಟೀಂ ಇಂಡಿಯಾ ವಿರುದ್ಧ 3ನೇ ಟಿ20 ಪಂದ್ಯದಲ್ಲಿ 7 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದ ಶ್ರೀಲಂಕಾ, ಟಿ20 ಸರಣಿ ಮುಡಿಗೇರಿಸಿಕೊಂಡಿದೆ.

ಪ್ರೇಮದಾಸ ಸ್ಟೇಡಿಯಂನಲ್ಲಿ ಗುರುವಾರ ಸಂಜೆ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆರಿಸಿಕೊಂಡ ಭಾರತ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ ಕೇವಲ 81 ರನ್‌ ಗಳಿಸಿತು. ಈ ಸಾಧಾರಣ ಗುರಿ ಬೆನ್ನತ್ತಿದ ಶ್ರೀಲಂಕಾ 14.3 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 82 ರನ್‌ಗಳಿಸುವ ಮೂಲಕ ಗೆಲುವಿನ ನಗೆಬೀರಿತು. ಆ ಮೂಲಕ 3 ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಿಂದ ಗೆಲುವು ಸಾಧಿಸಿ, ಏಕದಿನ ಸರಣಿ ಸೋಲಿಗೆ ಸೇಡು ತೀರಿಸಿಕೊಂಡಿತು.

ಪ್ರಮುಖ ಆಟಗಾರರ ಅಲಭ್ಯತೆ ಹಿನ್ನೆಲೆಯಲ್ಲಿ ಕಣಕ್ಕಿಳಿದ ಟೀಂ ಇಂಡಿಯಾ, ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ನಾಯಕ ಶಿಖರ್ ಧವನ್(0) ಮೊದಲ ಎಸೆತದಲ್ಲೇ ಔಟಾದರೆ.‌ ನಂತರ ಬಂದ ದೇವದತ್ತ ಪಡಿಕ್ಕಲ್‌ (9), ಸಂಜು ಸ್ಯಾಮ್ಸನ್‌ (0) ಹಾಗೂ ಋತುರಾಜ್‌ ಗಾಯಕ್ವಾಡ್‌ (14) ಕೂಡ ನಾಯಕನ ಹಾದಿ ಹಿಡಿದರು. ಪರಿಣಾಮ ಪವರ್‌ ಪ್ಲೇ ಅವಧಿಯಲ್ಲೇ ಭಾರತದ 4 ಬ್ಯಾಟ್ಸಮನ್ ಗಳು ಪೆವಿಲಿಯನ್ ಸೇರಿದರು.

ನಂತರ ನಿತೀಶ್‌ ರಾಣಾ(6) ಸಹ ಲಂಕಾ ದಾಳಿಯನ್ನು ನಿಭಾಯಿಸಿ ನಿಲ್ಲುವಲ್ಲಿ ವಿಫ‌ಲರಾದರು. ಈ ಹಿನ್ನೆಲೆಯಲ್ಲಿ ಭಾರತ 39 ರನ್ನಿಗೆ 5 ವಿಕೆಟ್‌ ಕಳೆದುಕೊಂಡು ಆಘಾತ ಅನುಭವಿಸಿತು. ಆದರೆ ಕೊನೆಯಲ್ಲಿ ಕುಲ್ದೀಪ್ ಯಾದವ್(ಅಜೇಯ 23 ರನ್‌) ಗಳಿಸುವ ಮೂಲಕ ಭಾರತದ ಪರ ಗರಿಷ್ಠ ಸ್ಕೋರರ್‌ ಆಗಿ ಮಿಂಚಿದರು. ಶ್ರೀಲಂಕಾ ಪರ ಹಸರಂಗ 9 ರನ್ ನೀಡಿ 4 ವಿಕೆಟ್‌ ಪಡೆದು ಮಿಂಚಿದರು.

ಭಾರತ ನೀಡಿದ 82 ರನ್ಗಗಳ ಸಾಧಾರಣ ಗುರಿ ಬೆನ್ನತ್ತಿದ ಶ್ರೀಲಂಕಾ, 14.3 ಓವರ್ ನಲ್ಲಿ ಚೇಸ್ ಮಾಡುವ ಮೂಲಕ 7 ವಿಕೆಟ್ ಗಳ ಜಯಭೇರಿ ಬಾರಿಸಿತು. ಭಾರತದ ಪರ ರಾಹುಲ್ ಚಹರ್, 3 ವಿಕೆಟ್ ಪಡೆದರು. ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಶ್ರೀಲಂಕಾದ ಯುವ ಆಟಗಾರ ವನಿಂದು ಹಸರಂಗ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದು ಮಿಂಚಿದರು.

Exit mobile version