ಶ್ರೀನಗರದ ಗ್ರೆನೇಡ್ ದಾಳಿ ; ಸಾವಿನ ಸಂಖ್ಯೆ 2ಕ್ಕೆ ಏರಿಕೆ!

grenade

ಶ್ರೀನಗರದ(Srinagar) ಸಿಟಿ ಸೆಂಟರ್ ಲಾಲ್ ಚೌಕ್ ಬಳಿ ಭಾನುವಾರ(Sunday) ನಡೆದ ಗ್ರೆನೇಡ್(Grenade) ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಈಗ ಎರಡಕ್ಕೆ ಏರಿಕೆ ಕಂಡಿದೆ. ಸೋಮವಾರ ಬೆಳಿಗ್ಗೆ ಇಲ್ಲಿನ ಆಸ್ಪತ್ರೆಯಲ್ಲಿ ಯುವತಿಯೊಬ್ಬಳು ಜೀವನ್ಮರಣ ಹೋರಾಟ ನಡೆಸಿ ಇಂದು ಸಾವನಪ್ಪಿದ್ದಾಳೆ. ಶ್ರೀನಗರದ ಎಸ್‌ಎಂಎಚ್‌ಎಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಕವಲ್ಜೀತ್ ಸಿಂಗ್, 20 ವರ್ಷದ ಮಹಿಳೆ ರಫಿಯಾ ಇಂದು ಮುಂಜಾನೆ ಸಾವನ್ನಪ್ಪಿದ್ದಾರೆ ಎಂದು ಹೇಳಿದರು. ಭಾನುವಾರದಂದು ಜನನಿಬಿಡ ಹೈ ಸ್ಟ್ರೀಟ್ ಮಾರುಕಟ್ಟೆಯಲ್ಲಿ ಸಂಜೆ 4.20ಕ್ಕೆ ಸಂಭವಿಸಿದ ಸ್ಫೋಟದಲ್ಲಿ ಅನೇಕ ಜನರಿಗೆ ಗಂಭೀರ ಗಾಯಗಳಾಗಿವೆ. 70 ವರ್ಷದ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದ ಗಾಯಾಳುಗಳನ್ನು ಶ್ರೀನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಉಗ್ರರು ದಾಳಿ ನಡೆಸಿದಾಗ ಮಾರುಕಟ್ಟೆಯಲ್ಲಿ ವಾರಾಂತ್ಯದಲ್ಲಿ ಭಾರಿ ಜನಸಂದಣಿ ಇದ್ದರು ಎನ್ನಲಾಗಿದೆ. ಈ ಒಂದು ಘಟನೆಯು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ. ಪ್ರತ್ಯೇಕವಾಗಿ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದ್ದು, ದಾಳಿಕೋರರು ನಿಂತಿದ್ದ ಪೊಲೀಸ್ ಶಸ್ತ್ರಸಜ್ಜಿತ ಟ್ರಕ್‌ನ ಬಳಿ ಗ್ರೆನೇಡ್ ಎಸೆದಿರುವುದನ್ನು ತೋರಿಸಿದೆ. ಸ್ಫೋಟವು ತೀವ್ರ ಹಾನಿಯನ್ನು ಉಂಟುಮಾಡಿದೆ. ಈ ಸ್ಫೋಟಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಆದರೆ, ಇದುವರೆಗೆ ದಾಳಿಕೋರರನ್ನು ಹಿಡಿಯಲು ಯಾವುದೇ ಪ್ರಗತಿ ಸಾಧಿಸಲಾಗಿಲ್ಲ. ಕಳೆದ ವರ್ಷ ಆಗಸ್ಟ್ 10 ರಂದು ಇದೇ ಸ್ಥಳದಲ್ಲಿ ಗ್ರೆನೇಡ್ ದಾಳಿಯಲ್ಲಿ ಹತ್ತು ನಾಗರಿಕರು ಗಾಯಗೊಂಡಿದ್ದರು. ನಂತರ ಈ ವರ್ಷದ ಜನವರಿ 25 ರಂದು, ಅದೇ ಸ್ಥಳದಲ್ಲಿ ಉಗ್ರರು ಗ್ರೆನೇಡ್ ಅನ್ನು ಲಾಬ್ ಮಾಡಿದಾಗ ಪೊಲೀಸ್ ಅಧಿಕಾರಿ ಮತ್ತು ಮೂವರು ನಾಗರಿಕರು ಗಾಯಗೊಂಡಿದ್ದರು.

ಕಳೆದ ಎರಡು ವರ್ಷಗಳಲ್ಲಿ ಕಾಶ್ಮೀರದಲ್ಲಿ ಗ್ರೆನೇಡ್ ದಾಳಿ ಪ್ರಕರಣಗಳು ಉಲ್ಬಣಗೊಂಡಿವೆ ಮತ್ತು ಭದ್ರತಾ ಪಡೆಗಳಿಗೆ ಆತಂಕಕಾರಿ ಸಂಗತಿ ಎಂದರೆ ಅವರು ಈಗಾಗಲೇ ಹೆಚ್ಚಿನ ಎಚ್ಚರಿಕೆಯಲ್ಲಿರುವ ಸಮಯದಲ್ಲಿ ಈ ದಾಳಿಗಳು ಸಂಭವಿಸುತ್ತಿವೆ. ಕೇಂದ್ರ ಕಾಶ್ಮೀರದ ಡಿಐಜಿ ಸುಜಿತ್ ಕುಮಾರ್, ಜನನಿಬಿಡ ಸ್ಥಳಗಳ ಮೇಲೆ ದಾಳಿ ಮಾಡುವುದು ಉಗ್ರಗಾಮಿಗಳ ಹೊಸ ಪ್ರವೃತ್ತಿಯಾಗಿದೆ ಎಂದು ಹೇಳಿದ್ದಾರೆ. ಆದರೆ, ಭದ್ರತಾ ಲೋಪವಾಗಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ ಜೊತೆಗೆ ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಮಾಧ್ಯಮಕ್ಕೆ ತಿಳಿಸಿದರು.

Exit mobile version