ಸಾಕು ನಿಲ್ಲಿಸಿ ಶೋಷಣೆ, ನಮ್ಮ ಹಕ್ಕು ನಮಗೆ ನೀಡಿ : ಹಾಲಕ್ಕಿ ಹಕ್ಕೋತ್ತಾಯ.

COVER STORY | I will Give back Padma Shri Award if government denies ST status for Halakki Okkalu.

ಎಸ್‌ಟಿ ಸ್ಥಾನಮಾನ ನೀಡದಿದ್ರೆ ಪದ್ಮಶ್ರೀ ವಾಪಾಸ್‌ ಪಡೆಯಿರಿ: ಸುಕ್ರಜ್ಜಿ 

Stop exploitation, give our right. Halakki Okkalu demanding central government to give ST status to them.

ಸಿಡಿದೆದ್ದಿದ್ದಾರೆ  ಉತ್ತರ ಕನ್ನಡದ ಹಾಲಕ್ಕಿ ಒಕ್ಕಲು ಮಕ್ಕಳು. ಶತಮಾನಗಳ ಶೋಷಣೆಯ ವಿರುದ್ಧ ಹೋರಾಡಲು ಸಿದ್ಧ. ವಿಜಯಟೈಮ್ಸ್‌ ಅಧ್ಯಯನದಲ್ಲಿ ಬಯಲಾಯ್ತು ಕಟು ಸತ್ಯ! ಮೂಲಭೂತ ಸೌಕರ್ಯಕ್ಕೂ ಪರದಾಡುತ್ತಿದ್ದಾರೆ ಹಾಲಕ್ಕಿ ಮಕ್ಕಳು. ಪರಿಶಿಷ್ಟ ಪಂಗಡ ಸ್ಥಾನಮಾನ ನೀಡದೆ ಹಾಲಕ್ಕಿಗಳಿಗೆ ಅನ್ಯಾಯ. ಶೈಕ್ಷಣಿಕವಾಗಿ, ಆರ್ಥಿಕವಾಗಿ ಭಾರೀ ಹಿಂದುಳಿದಿದ್ದಾರೆ ಹಾಲಕ್ಕಿಗಳು. ಬುಡಕಟ್ಟು ಜನಾಂಗದವರಾಗಿದ್ರೂ ಇನ್ನೂ ಸಿಗಲಿಲ್ಲ ಎಸ್‌ಟಿ ಪಟ್ಟ. ರಾಜಕಾರಣಿಗಳು ಭರವಸೆಯಿಂದ ಮೋಸ ಹೋಗಿದ್ರು ಹಾಲಕ್ಕಿಗಳು

ಹಾಲಕ್ಕಿ ಒಕ್ಕಲು ಜನಾಂಗಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡದಿದ್ರೆ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಕ್ಕೆ ನೀಡುವುದಾಗಿ ಕರುನಾಡಿನ ಹೆಸರಾಂತ ಜನಪದ ಕಲಾವಿದೆ, ಹಾಲಕ್ಕಿ ಕೋಗಿಲೆ, ಪದ್ಮಶ್ರೀ ಪುರಸ್ಕೃತೆ  ಸುಕ್ರಿ ಬೊಮ್ಮೇ ಗೌಡ  ಗುಡುಗಿದ್ದಾರೆ. ನೋವಿನಿಂದ ಪ್ರಶಸ್ತಿ  ವಾಪಾಸ್‌ ಕೊಡೋದಾಗಿ  ನುಡಿದಿದ್ದಾರೆ.

ಕರುನಾಡಿನ ಜನಪದ ಸಿರಿ, ಈ ನಾಡಿನ ಹೆಮ್ಮೆಯ ಕಲಾವಿದೆ ಈ ರೀತಿ ನೊಂದು ನುಡಿಯಲು ಕಾರಣ ಏನು?  ಈ ಇಳಿ ವಯಸ್ಸಿನಲ್ಲಿ ಇಂಥಾ ಕಠಿಣ ನಿರ್ಧಾರ ಮಾಡಲು ಕಾರಣ ಏನು? ಸುಕ್ರಜ್ಜಿ ಬೇಡಿಕೆಯಾದ್ರೂ ಏನು? ಹಾಲಕ್ಕಿ ಒಕ್ಕಲಿಗೆ ಆಗಿರುವ ಅನ್ಯಾಯವಾದ್ರೂ ಏನು? ಇದನ್ನು ತಿಳೀಬೇಕು. ಹಾಲಕ್ಕಿ ಸಮುದಾಯದ ಸ್ಥಿತಿಗತಿ ಅರೀಬೇಕು ಅನ್ನೋ ನಿರ್ಧಾರದಿಂದ ವಿಜಯಟೈಮ್ಸ್‌ನ ಕವರ್‌ಸ್ಟೋರಿ ತಂಡ ಉತ್ತರ ಕನ್ನಡ ಭಾಗಕ್ಕೆ ಪ್ರಯಾಣ ಬೆಳೆಸಿತು.

ಉತ್ತರ ಕನ್ನಡ ಜಿಲ್ಲೆಯ ಮೂಲ ನಿವಾಸಿಗಳಾದ ಹಾಲಕ್ಕಿ ಒಕ್ಕಲು ಅನ್ನೋದು ಒಂದು ಬುಡಕಟ್ಟು ಜನಾಂಗ. ಜಿಲ್ಲೆಯ ನಾಲ್ಕು ತಾಲ್ಲೂಕುಗಳಾದ ಕುಮಟಾ, ಕಾರವಾರ, ಅಂಕೋಲ, ಹೊನ್ನಾವರದಲ್ಲಿ ವಾಸಿಸುವ ಅತ್ಯಂತ ಹಿಂದುಳಿದ ಜನಾಂಗವಾಗಿದೆ. ತುಂಡು ಭೂಮಿಯಲ್ಲಿ ಕೃಷಿ ಮಾಡುತ್ತಿರುವ ಹಾಲಕ್ಕಿ ಮಕ್ಕಳು ಬಡತನದ ಬೇಗೆಯಲ್ಲಿ ಬೇಯುತ್ತಿದ್ದಾರೆ. ಹೂ, ಹಣ್ಣು, ತರಕಾರಿ ಮಾರಿ ಬದುಕ ಬಂಡಿ ಸಾಗಿಸುತ್ತಿದ್ದಾರೆ.

ಶಿಕ್ಷಣ ಇನ್ನೂ ಇವರ ಪಾಲಿಗೆ ಶ್ರೀರಕ್ಷೆಯಾಗಿಲ್ಲ. ಸರ್ಕಾರಿ ಉದ್ಯೋಗಗಳು ಮರೀಚಿಕೆಯಾಗಿವೆ. ಮನೆ, ನೀರಿನಂಥಾ ಮೂಲಭೂತ ಸೌಕರ್ಯಗಳಿಂದಲೂ ವಂಚಿತರಾಗಿದ್ದಾರೆ. ಇವರ ಈ ಕಷ್ಟಕ್ಕೆ ಸಂಕಷ್ಟಕ್ಕೆ ಮುಖ್ಯ ಕಾರಣ ಏನು ಅಂತ ಅಧ್ಯಯನ ಮಾಡಲು ನಾವು ಹಾಲಕ್ಕಿ ಒಕ್ಕಲು ಜನರು ವಾಸಿಸೋ ಹಾಡಿಗಳಿಗೇ ಭೇಟಿ ಕೊಟ್ವಿ. ಆಗ ಕವರ್‌ಸ್ಟೋರಿ ತಂಡಕ್ಕೆ ಅಚ್ಚರಿಯ ಅಂಶಗಳು ಸಿಕ್ಕವು.

ಹಾಲಕ್ಕಿ ಗೂಡನ್ನೊಮ್ಮೆ ನೋಡಿ !: ಹಾಲಕ್ಕಿ ಒಕ್ಕಲು ವಾಸಿಸುತ್ತಿರುವ ಹೆಚ್ಚಿನ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲ. ಅದ್ರಲ್ಲೂ ಕುಮಟಾ ತಾಲ್ಲೂಕಿನ ಮುಸ್ಕೊಪ್ಪೆ ಗ್ರಾಮದ ಜನರು ನೀರು, ರಸ್ತೆ, ಬಸ್‌, ಶೌಚಾಲಯ ಇಲ್ಲದೆ ಬಹಳ ಕಷ್ಟ ಅನುಭವಿಸುತ್ತಿದ್ದಾರೆ. ಇಲ್ಲಿನ ಅದೆಷ್ಟೋ ಜನರು ಸರಿಯಾದ ಮನೆಗಳಿಲ್ಲದೆ ಕಷ್ಟ ಅನುಭವಿಸುತ್ತಿದ್ದಾರೆ.   ಇಲ್ಲಿನ ಸಾರಿಗೆ, ಆರೋಗ್ಯ ವ್ಯವಸ್ಥೆಯ ಕತೆ ಕೇಳಲೇ ಬೇಡಿ. ಇಲ್ಲಿ ಯಾರಾದ್ರೂ ಅನಾರೋಗ್ಯ ಪೀಡಿತರಾದ್ರೆ ಅವರನ್ನೂ ಇವತ್ತಿಗೂ ಕಂಬಳಿಯಲ್ಲಿ ಹೊತ್ತು ಸಾಗಿಸಬೇಕು. ಬೆಟ್ಟ ಹತ್ತಿ ಆಸ್ಪತ್ರೆ ಸೇರುಷ್ಟರ ಹೊತ್ತಿಗೆ ಎಷ್ಟೋ ಜೀವಗಳು ಇಲ್ಲವಾಗಿವೆಯಂತೆ.

ಪದ್ಮಶ್ರೀ ತುಳಸಜ್ಜಿ ಮನೆಗೇ ಕಾಲ್ಸೇತುವೆ ಇಲ್ಲ: ದುರಂತ ಅಂದ್ರೆ ಪದ್ಮಶ್ರೀ ಗೆ ಭಾಜನರಾದ ವೃಕ್ಷಮಾತೆ ಅಂತಲೇ ಪ್ರಸಿದ್ಧಿ ಪಡೆದಿರುವ ತುಳಸಿ ಗೌಡ ಅವರ ಮನೆಗೆ ಹೋಗಲು ಕಾಲು ಸೇತುವೆಯೇ ಇಲ್ಲ. ಈ ಇಳಿ ವಯಸ್ಸಿನಲ್ಲಿ ಅವರಿಗೆ ಓಡಾಡಲು ಕಾಲು ದಾರಿಯೂ ಇಲ್ಲ. ಈ ಬಗ್ಗೆ ವಿಜಯಟೈಮ್ಸ್ ಅಗಸೂರು ಗ್ರಾಮ ಪಂಚಾಯತ್‌ಗೆ ದೂರು ನೀಡಿ, ಕಾಲು ಸೇತುವೆ ನಿರ್ಮಿಸಿ ಕೊಡುವಂತೆ ಪಿಡಿಓ ಅವರಿಗೆ ತುಳಸಜ್ಜಿ ಮುಖಾಂತರ ಮನವಿ ಸಲ್ಲಿಸಲಾಯಿತು.

ಹಾಲಕ್ಕಿ ಒಕ್ಕಲು ಉತ್ತರ ಕನ್ನಡದ ನಾಲ್ಕು ತಾಲ್ಲೂಕುಗಳಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದೆ. ಆದ್ರೆ ಇವರಲ್ಲಿ ರಾಜಕೀಯ ಮುಖಂಡತ್ವ ಇಲ್ಲದ ಕಾರಣ ಇವರ ಬೇಡಿಕೆಗಳು ಮೂಲೆ ಸೇರುತ್ತಿವೆ. ನಾನಾ ರಾಜಕೀಯ ಪಕ್ಷಗಳು ಚುನಾವಣೆ ವೇಳೆ ಹಾಲಕ್ಕಿ ಒಕ್ಕಲು ಜನಾಂಗವನ್ನು ಪರಿಶಿಷ್ಟ  ಪಂಗಡಕ್ಕೆ ಸೇರಿಸುವುದಾಗಿ ಭರವಸೆಯನ್ನಷ್ಟೇ ನೀಡುತ್ತಿದ್ದಾರೆ. ಆ ಬಳಿಕ ಮತ ಪಡೆದು ಈ ಜನಾಂಗವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದ್ದಾರೆ.

ಹಾಲಕ್ಕಿ ಒಕ್ಕಲು ಬುಡಕಟ್ಟು ಜನಾಂಗಕ್ಕೆ ಸೇರಿದ್ದು. ಆದ್ರೆ ಸರ್ಕಾರ ತಮ್ಮ ಜನಾಂಗಕ್ಕೆ ಆ ಸ್ಥಾನಮಾನ ನೀಡುತ್ತಿಲ್ಲ. ನಮಗೆ ಅನ್ಯಾಯ ಮಾಡುತ್ತಿದೆ.  ರಾಜಕಾರಣಿಗಳು ಹಾಲಕ್ಕಿ ಒಕ್ಕಲು ಜನಾಂಗದ  ಮತ ಬಳಸಿ, ಅವರು ಉದ್ಶಾರ ಆಗಿದ್ದಾರೆ. ಆದ್ರೆ ಹಾಲಕ್ಕಿ ಮಕ್ಕಳು ಇನ್ನೂ ತೀರ ಕೆಳಮಟ್ಟದಲ್ಲಿದ್ದಾರೆ. ಇದನ್ನು ಖಂಡಿಸಿ, ನೊಂದು ಸುಕ್ರಜ್ಜಿ ಪದ್ಮಶ್ರೀ ವಾಪಾಸ್‌ ನೀಡೋ ಮಾತುಗಳನ್ನಾಡಿದ್ದಾರೆ. ಈ ನುಡಿಗಳು ಹಾಲಕ್ಕಿ ಮಕ್ಕಳಲ್ಲಿ ಹೋರಾಟದ ಕಿಚ್ಚು ಹಚ್ಚಿದೆ. ತಮ್ಮ ಹಕ್ಕನ್ನು, ಸಂವಿಧಾನದತ್ತವಾಗಿ ಸಿಗಬೇಕಾದ ಸ್ಥಾನಮಾನನ್ನು ಪಡೆಯುವ ಛಲ ಹುಟ್ಟಿದೆ. ಇದರ ಮೊದಲ ಹೆಜ್ಜೆಯಾಗಿ ಪದ್ಮಶ್ರೀ ಸುಕ್ರಜ್ಜಿ, ವೃಕ್ಷಮಾತೆ ಪ್ರದ್ಮಶ್ರೀ ಪ್ರಶಸ್ತಿಗೆ ಜನರಾಗಿರುವ ತುಳಸಿ ಗೌಡ ಅವರ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾಧಿಕಾರಿಗಳು ಇವರ ಮನವಿಯನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ರು. ಜಿಲ್ಲಾಧಿಕಾರಿಗಳ ಭರವಸೆ ಎಷ್ಟರ ಮಟ್ಟಿಗೆ ನಿಜವಾಗುತ್ತೆ ಅನ್ನೋದನ್ನ ಕಾದುನೋಡೋಣ. ಒಂದು ವೇಳೆ ತಮ್ಮ ಭರವಸೆ ಈಡೇರದಿದ್ರೆ ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಬೆಂಗಳೂರು, ದೆಹಲಿ ಚಲೋ ಮಾಡಲು ಸಿದ್ಧರಾಗಿದ್ದಾರೆ.

Exit mobile version