ಮುಂಬರುವ ರಾಜ್ಯ ವಿಧಾನಸಭಾ(Vidhansabha) ಚುನಾವಣೆಗೆ(Election)ಪ್ರಚಾರಕಾರ್ಯ ಪ್ರಾರಂಭಿಸಿರುವ ರಾಜ್ಯ ಕಾಂಗ್ರೆಸ್(State Congress) ನಾಯಕರಿಗೆ ನಿಕಟಪೂರ್ವ ಕಾಂಗ್ರೆಸ್ ಅಧ್ಯಕ್ಷ(Congress Leader) ರಾಹುಲ್ ಗಾಂಧಿ(Rahul Gandhi) ಬಿಜೆಪಿಯ ಹಿಂದುತ್ವದ ಅಸ್ತ್ರಗಳನ್ನು ನೇರವಾಗಿ ಖಂಡಿಸಿ, ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಷಡ್ಯಂತ್ರಗಳ ವಿರುದ್ದ ಹೋರಾಡಿ ಎಂದು ಕರೆ ನೀಡಿದ್ದಾರೆ.
ಕಳೆದ ವಾರ ಕರ್ನಾಟಕಕ್ಕೆ ಆಗಮಿಸಿದ್ದ ವೇಳೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಕೆಲ ಪ್ರಮುಖ ಸೂಚನೆಗಳನ್ನು ರಾಹುಲ್ ಗಾಂಧಿ ನೀಡಿದ್ದಾರೆ. ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಬಿಜೆಪಿ ಅನೇಕ ಅಸ್ತ್ರಗಳನ್ನು ಪ್ರಯೋಗಿಸುತ್ತಿದೆ. ಹಿಜಾಬ್, ಹಲಾಲ್, ಮದರಸಾಗಳ ಶಿಕ್ಷಣ, ವ್ಯಾಪಾರ ಬಹಿಷ್ಕಾರ ಸೇರಿದಂತೆ ಅನೇಕ ಅಸ್ತ್ರಗಳನ್ನು ಬಿಜೆಪಿ ಪ್ರಯೋಗಿಸಿ ತನ್ನ ಮತಬ್ಯಾಂಕ್‍ನ್ನು ಒಗ್ಗೂಡಿಸುತ್ತಿದೆ. ಹಿಂದೂ ಮತಬ್ಯಾಂಕ್‍ನ್ನು ಒಗ್ಗೂಡಿಸುವಲ್ಲಿ ಬಿಜೆಪಿ ಯಶಸ್ಸು ಕಂಡಿದೆ. ಬಿಜೆಪಿಯ ಈ ಅಸ್ತ್ರಗಳಿಗೆ ತಕ್ಕ ಪ್ರತ್ಯುತ್ತರ ನೀಡುವಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಎಡವಿದ್ದಾರೆ.
ಬಿಜೆಪಿಯ ಹಿಂದುತ್ವದ ಅಸ್ತ್ರಗಳನ್ನು ಯಾವ ರೀತಿ ಎದುರಿಸಬೇಕೆಂಬ ಗೊಂದಲದಲ್ಲೇ ಕಾಂಗ್ರೆಸ್ ಕಾಲ ಕಳೆಯುತ್ತಿದೆ. ಪರವಹಿಸಿ ಮಾತನಾಡಿದರೆ ಹಿಂದೂ ಮತಗಳು ಕೈತಪ್ಪಲಿವೆ ಇತ್ತ ವಿರೋಧಿಸಿದರೆ ಮುಸ್ಲಿಮರ ಮತಗಳು ಕೈತಪ್ಪಲಿವೆ. ಹೀಗಾಗಿ ಯಾವ ನಿಲುವು ತೆಗೆದುಕೊಳ್ಳಬೇಕೆಂದು ಗೊಂದಲದಲ್ಲಿದ್ದ ಕಾಂಗ್ರೆಸ್ ನಾಯಕರಿಗೆ ರಾಹುಲ್ ಗಾಂಧಿ ನೀಡಿರುವ ಸೂಚನೆ ಹೊಸ ಹುಮ್ಮಸ್ಸು ನೀಡಿದೆ. ಕಾಂಗ್ರೆಸ್ ಪಕ್ಷದ ಜಾತ್ಯಾತೀತ ಸಿದ್ದಾಂತಕ್ಕೆ ಕಟಿಬದ್ದರಾಗಿ ಕೆಲಸ ಮಾಡಿ. ಬಿಜೆಪಿಯ ಹಿಂದುತ್ವದ ಅಸ್ತ್ರಗಳನ್ನು ನೇರವಾಗಿ ಖಂಡಿಸಿ, ಅದರ ವಿರುದ್ದ ಹೋರಾಟ ಮಾಡಿ.
ಪಕ್ಷದ ಸಿದ್ದಾಂತದಲ್ಲಿ ನಮಗೆ ಗೊಂದಲಬೇಡ. ಈ ವಿಚಾರದಲ್ಲಿ ಯಾವುದೇ ರಾಜೀಮಾಡಿಕೊಳ್ಳಬೇಡಿ ಎಂದು ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ರಾಹುಲ್ ಗಾಂಧಿ ನೀಡಿದ ಸೂಚನೆ ಬೆನ್ನಲ್ಲೇ ಬಿಜೆಪಿ ಮೇಲೆ ಪ್ರಹಾರ ನಡೆಸಿರುವ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜಕೀಯ ಉದ್ದೇಶಕ್ಕಾಗಿ ಬಿಜೆಪಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದೆ. ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಬಿಜೆಪಿ ರಾಜಕೀಯ ಮಾಡುತ್ತಿದೆ.
ಮುಖ್ಯಮಂತ್ರಿಗಳು ಸಂವಿಧಾನ ಬದ್ದರಾಗಿ ಪ್ರಮಾಣವಚನ ಸ್ವೀಕರಿಸಿ ಹುದ್ದೆ ಅಲಂಕರಿಸಿದ್ದಾರೆ. ಹೀಗಾಗಿ ಈ ಎಲ್ಲ ದುರುದ್ದೇಶಪೂರಿತ ಕೆಲಸಗಳಿಗೆ ಕೂಡಲೇ ಸಿಎಂ ಕಡಿವಾಣ ಹಾಕಬೇಕು. ನಿಮ್ಮ ಪಕ್ಷದ ಹೆಸರು ಹೇಳಿಕೊಂಡು ಇದನ್ನೆಲ್ಲಾ ಮಾಡುತ್ತಿರುವವ ವಿರುದ್ದ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ.