ಎಸ್ಎಸ್ಎಲ್ಸಿ ಪರೀಕ್ಷೆ ರದ್ದು ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ

ಬೆಂಗಳೂರು: ಎಸ್ಎಸ್ಎಲ್​ಸಿ ಪರೀಕ್ಷೆ ರದ್ದು ಕೋರಿ ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಸಿಂಗ್ರೇಗೌಡ ಎಂಬುವರಿಂದ ಹೈಕೋರ್ಟ್​ಗೆ ಎಸ್​ಎಸ್​ಎಲ್​ಸಿ ಪರೀಕ್ಷೆ ರದ್ದು ಕೋರಿ ಪಿಐಎಲ್ ದಾಖಲಾಗಿದ್ದು, ಕೊವಿಡ್​ನಿಂದ ಸರ್ಕಾರ ಪಿಯು ಪರೀಕ್ಷೆ ರದ್ದು ಮಾಡಿದೆ. ಹೀಗಾಗಿ ಎಸ್ಎಸ್ಎಲ್​ಸಿ ಪರೀಕ್ಷೆಯನ್ನೂ ರದ್ದು ಮಾಡಲು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಈ ಮುನ್ನವೇ ಎಸ್​ಎಸ್​ಎಲ್​ಸಿ ಪರೀಕ್ಷೆಗೆ ದಿನಾಂಕ ನಿಗದಿಪಡಿಸಲಾಗಿದೆ. ಜುಲೈ 19 ಮತ್ತು ಜುಲೈ 22ರಂದು  ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಸಲಾಗುವುದು ಎಂದು ಘೋಷಿಸಲಾಗಿದ್ದು, ಪರೀಕ್ಷೆ ರದ್ದುಗೊಳಿಸುವಂತೆ ಇದೀಗ ಅರ್ಜಿ ಸಲ್ಲಿಸಲಾಗಿದೆ.

ನಿಗದಿಪಡಿಸಿರುವ ವೇಳಾಪಟ್ಟಿ ಇಲ್ಲಿದೆ:

ಜುಲೈ 19ರಂದು(ಸೋಮವಾರ) ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಪರೀಕ್ಷೆ ಬೆಳಗ್ಗೆ 10.30ರಿಂದ 1.30ರ ತನಕ ಅದೇ ದಿನ ಮಧ್ಯಾಹ್ನ ಕಿರಿಯ ತಾಂತ್ರಿಕ ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. ಜುಲೈ 22ರಂದು (ಗುರುವಾರ) ಬೆಳಗ್ಗೆ 10.30ರಿಂದ 1.30ರ ತನಕ ಭಾಷಾ ವಿಷಯಗಳ (ಪ್ರಥಮ ಭಾಷೆ ಕನ್ನಡ, ಪ್ರಥಮ ಭಾಷೆ ಉರ್ದು, ಪ್ರಥಮ ಭಾಷೆ ಇಂಗ್ಲಿಷ್, ಪ್ರಥಮ ಭಾಷೆ ಸಂಸ್ಕೃತ, ದ್ವಿತೀಯ ಭಾಷೆ ಇಂಗ್ಲಿಷ್, ದ್ವಿತೀಯ ಭಾಷೆ ಕನ್ನಡ, ತೃತೀಯ ಭಾಷೆ ಹಿಂದಿ, ತೃತೀಯ ಭಾಷೆ ಇಂಗ್ಲಿಷ್) ಪರೀಕ್ಷೆ ನಡೆಯಲಿದೆ. ಅದೇ ದಿನ ಮಧ್ಯಾಹ್ನ  NSQF ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. ಇದಕ್ಕೆ ಸಂಬಂಧಿಸಿದಂತೆ ಜೂನ್​ 30ರಂದು ಪರೀಕ್ಷಾ ಹಾಲ್​ಟಿಕೆಟ್​ಗಳನ್ನು ಶಾಲೆಗೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ

ಈ ವರ್ಷ 8,76,581 ವಿದ್ಯಾರ್ಥಿಗಳು ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯಲಿದ್ದಾರೆ, ಕಳೆದ ಬಾರಿ 8 ಲಕ್ಷದ 46 ಸಾವಿರ ವಿದ್ಯಾರ್ಥಿಗಳಿದ್ದರು. ಎಸ್​ಎಸ್​ಎಲ್​ಸಿ ಪರೀಕ್ಷೆಗೆಂದೇ ಈ ವರ್ಷ 73,066 ಪರೀಕ್ಷಾ ಕೊಠಡಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಕಳೆದ ಬಾರಿಯಂತೆಯೇ ಈ ಬಾರಿಯೂ ಪರೀಕ್ಷಾ ಕೇಂದ್ರಗಳು ಮಕ್ಕಳ ಸುರಕ್ಷಾ ಕೇಂದ್ರವಾಗಿರಲಿವೆ. ಕರ್ನಾಟಕ ಪ್ರೌಢ ಪರೀಕ್ಷಾ ಮಂಡಳಿ ಪರೀಕ್ಷಾ ತುರ್ತು ಸಿದ್ಧತೆಯನ್ನು ಆರಂಭಿಸಿದೆ. ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಕೊರೊನಾ ನಿಯಮಗಳನ್ನು ಪಾಲಿಸಲು ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಆರು ಆಡಿಗೆ ಒಂದರಂತೆ ಆಸನ ವ್ಯವಸ್ಥೆ ಮಾಡಲಾಗುತ್ತಿದ್ದು, ಕೊಠಡಿಯಲ್ಲಿ ಗಾಳಿ, ಬೆಳಕಿನ ವ್ಯವಸ್ಥೆ ಸಮರ್ಪಕವಾಗಿರುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಜತೆಗೆ, ಸಿಸಿಟಿವಿ ಕ್ಯಾಮರಾ ಅಳವಡಿಕೆ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಪರೀಕ್ಷಾ ಕೇಂದ್ರಗಳಿಂದ 200 ಮೀಟರ್​ ಅಂತರದಲ್ಲಿ ನಿಷೇಧಾಜ್ಞೆ ಇರಲಿದೆ ಎಂದು ತಿಳಿಸಿದ್ದಾರೆ.

ಯಾವುದಾದರೂ ಮಗುವಿಗೆ ಪಾಸಿಟಿವ್​ ಇದ್ದರೂ ಪರೀಕ್ಷೆ ಬರೆಯುವ ಆಸೆ ಇದ್ದರೆ, ಹತ್ತಿರದ ಕೊವಿಡ್​ ಕೇಂದ್ರಗಳಲ್ಲಿ ಅವಕಾಶ ಕಲ್ಪಿಸಲಾಗುವುದು. ಜತೆಗೆ, ಪರೀಕ್ಷೆ ಬರೆಯುವಾಗ ಯಾವುದಾದರೂ ರೋಗ ಲಕ್ಷಣಗಳಿದ್ದರೆ ಅವರಿಗೆ ಪ್ರತ್ಯೇಕ ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು. ಮಕ್ಕಳಿಗೆ ಎನ್​ 95 ಮಾಸ್ಕ್​ ಅಗತ್ಯವಿಲ್ಲ, ಉತ್ತಮ ಬಟ್ಟೆಯ ಮಾಸ್ಕ್​ ಸಾಕು ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ ಸ್ವಚ್ಛವಾದ ಬಟ್ಟೆಯ ಮಾಸ್ಕ್​ ಅಥವಾ ಸರ್ಜಿಕಲ್​ ಮಾಸ್ಕ್​ ಬಳಕೆ ಮಾಡಬಹುದು. ಯಾರಿಗಾದರೂ ರೋಗ ಲಕ್ಷಣಗಳಿದ್ದರೆ ಅವರಿಗೆ ಎನ್​95 ಕಡ್ಡಾಯ ಎಂದು ಸೂಚಿಸಿದ್ದಾರೆ. ಅಂತೆಯೇ, ಕೊವಿಡ್​ ಕಾರಣಕ್ಕೆ ಯಾವುದಾದರೂ ವಿದ್ಯಾರ್ಥಿ ಪರೀಕ್ಷೆ ಬರೆಯಲಾಗದಿದ್ದರೆ ಅವರಿಗೆ ಮತ್ತೊಮ್ಮೆ ಪರೀಕ್ಷೆ ನೀಡಿ, ಹೊಸಬರೆಂದೇ ಪರಿಗಣಿಸಿ ಪರೀಕ್ಷೆ ಬರೆಸಲಾಗುವುದು ಇದರಲ್ಲಿ ಭಯಬೇಡ ಎಂದು ಹೇಳಿದ್ದಾರೆ.

Exit mobile version