ಸಿಬಿಐ ನೂತನ ಮುಖ್ಯಸ್ಥರಾಗಿ ಮಹಾರಾಷ್ಟ್ರ ಕೇಡರ್‌ನ ಐಪಿಎಸ್ ಅಧಿಕಾರಿ ಸುಬೋಧ್ ಕುಮಾರ್ ಜೈಸ್ವಾಲ್ ನೇಮಕ

ಹೊಸದಿಲ್ಲಿ, ಮೇ. 26: ಸಿಬಿಐಗೆ ನೂತನ ಮುಖ್ಯಸ್ಥರ ಘೋಷಣೆ ಮಾಡಲಾಗಿದ್ದು, ಐಪಿಎಸ್ ಅಧಿಕಾರಿ ಸುಬೋಧಕುಮಾರ ಜೈಸ್ವಾಲ್ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.

ಮಹಾರಾಷ್ಟ್ರ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿರುವ ಸುಬೋಧ್ ಕುಮಾರ್ ಅವರು, ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CSIF) ಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಇವರು 1985ನೇ ಬ್ಯಾಚ್​ನ ಮಹಾರಾಷ್ಟ್ರ ಕೇಡರ್​ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಸಿಬಿಐನ ನಿರ್ದೇಶಕನ ಸ್ಥಾನಕ್ಕೆ ಸುಬೋಧ್ ಕುಮಾರ್​​​ ಜೈಸ್ವಾಲ್​ ಜತೆ ಕೆ.ಆರ್​. ಚಂದ್ರ ಮತ್ತು ವಿ.ಎಸ್​.ಕೌಮುದಿ ಹೆಸರು ಪಟ್ಟಿಯಲ್ಲಿತ್ತು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ, ಸುಪ್ರೀಂಕೋರ್ಟ್​ ಮುಖ್ಯನ್ಯಾಯಮೂರ್ತಿ ಎನ್​. ವಿ. ರಮಣ, ಲೋಕಸಭೆ ಪ್ರತಿಪಕ್ಷ ನಾಯಕ ಅಧೀರ್ ರಂಜನ್​ ಚೌಧರಿ ಅವರನ್ನೊಳಗೊಂಡ ಸಮಿತಿ ಈ ಮೂವರ ಹೆಸರನ್ನು ಆಯ್ಕೆ ಮಾಡಿತ್ತು. ಅದರಲ್ಲಿ ಸುಬೋಧ್​ ಜೈಸ್ವಾಲ್​ ಹೆಸರು ಮುಂಚೂಣಿಯಲ್ಲಿತ್ತು.

ಸಮಿತಿಯ ಶಿಫಾರಸಿನ ಅನ್ವಯ ಸುಬೋಧ್​ ಕುಮಾರ್ ಜೈಸ್ವಾಲ್​ ಅವರನ್ನು, 2 ವರ್ಷಗಳ ಅವಧಿಗೆ ಸಿಬಿಐನ ನೂತನ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಆದೇಶ ಹೊರಡಿಸಿದೆ.

Exit mobile version