ನವದೆಹಲಿ,ಜೂ.21: ಮೌಲ್ಯಮಾಪನ ಸೂತ್ರದ ಬಗ್ಗೆ ಇರುವ ಗೊಂದಲ ಕುರಿತು ಸಿಬಿಎಸ್ಇ ಮತ್ತು ಐಸಿಎಸ್ಇ ಮಂಡಳಿಗಳು ಪ್ರತಿಕ್ರಿಯಿಸಬೇಕು ಎಂದು ಸುಪ್ರೀಂಕೋರ್ಟ್ ಇಂದು ಸೂಚಿಸಿದೆ. 12ನೇ ತರಗತಿಗೆ ಎರಡೂ ಶೈಕ್ಷಣಿಕ ಮಂಡಳಿಗಳು ಪರೀಕ್ಷೆ ರದ್ದುಪಡಿಸಿವೆ. ಆದರೆ ಮೌಲ್ಯಮಾಪನದ ಬಗ್ಗೆ ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಸಾಕಷ್ಟು ಪ್ರಶ್ನೆಗಳಿವೆ. ಈ ಗೊಂದಲವನ್ನು ಪರಿಹರಿಸಬೇಕು ಎಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ದಿನೇಶ್ ಮಹೇಶ್ವರಿ ಅವರಿದ್ದ ನ್ಯಾಯಪೀಠವು ಪೋಷಕರು ಮತ್ತು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಮಂಗಳವಾರ ಪ್ರತಿಕ್ರಿಯಿಸಬೇಕು ಎಂದು ಸೂಚಿಸಿ, ವಿಚಾರಣೆಯನ್ನು ಮುಂದೂಡಿತು.
ಉತ್ತರ ಪ್ರದೇಶ ಪೋಷಕರ ಒಕ್ಕೂಟದ ಪರವಾಗಿ ವಾದ ಮಂಡಿಸಿದ ವಕೀಲ ವಿಕಾಸ್ ಸಿಂಗ್, ಲಿಖಿತ ಪರೀಕ್ಷೆಯನ್ನು ಒಂದು ಆಯ್ಕೆಯಾಗಿ ಸಿಬಿಎಸ್ಇ ಪರಿಗಣಿಸಿದೆ. ಆಂತರಿಕ ಮೌಲ್ಯಮಾಪನದಲ್ಲಿ ಉತ್ತಮ ಸಾಧನೆ ಮಾಡದ ವಿದ್ಯಾರ್ಥಿಗಳು ಎಂದಿನಂತೆ ಪರೀಕ್ಷೆ ಬರೆಯಲು ಬಯಸುತ್ತಾರೆ. ಇದು ಅಂಥವರಿಗೆ ಅನುಕೂಲ ಕಲ್ಪಿಸುತ್ತದೆ. ಯಾವುದೇ ನಿರ್ಧಾರವನ್ನು ಅಂತಿಮಗೊಳಿಸುವ ಮೊದಲೇ ಈ ಆಯ್ಕೆಯನ್ನು ವಿದ್ಯಾರ್ಥಿ ಮತ್ತು ಶಾಲೆಗಳಿಗೆ ಕೊಡಬೇಕು. ಯಾವುದೇ ಶಾಲೆ ಅಥವಾ ವಿದ್ಯಾರ್ಥಿಗೆ ಆಂತರಿಕ ಮೌಲ್ಯಮಾಪನ ಅಥವಾ ಮಾಮೂಲಿ ಪರೀಕ್ಷೆಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಇರಬೇಕು. ಯಾವುದೇ ವಿದ್ಯಾರ್ಥಿ ಅಥವಾ ಶಾಲೆ ಆಂತರಿಕ ಮೌಲ್ಯಮಾಪನ ಬೇಡ ಎಂದು ತೀರ್ಮಾನಿಸಿದರೆ ಅಂಥವರಿಗಾಗಿ ಸಾಮಾನ್ಯ ಪರೀಕ್ಷೆ ನಡೆಸಲು ಜುಲೈ ಅಥವಾ ಬೇರೆ ಯಾವುದೇ ತಿಂಗಳಲ್ಲಿ ದಿನಾಂಕ ನಿಗದಿಪಡಿಸಬೇಕು ಎಂದು ಕೋರಿದರು.
ವಿದ್ಯಾರ್ಥಿಗಳಿಗೆ ಭವಿಷ್ಯದ ಬಗ್ಗೆ ಯಾವುದಾದರೂ ಒಂದು ರೀತಿಯ ಆಶಾಕಿರಣ ಇರಬೇಕು. ಮೌಲ್ಯಮಾಪನ ಮತ್ತು ಪರೀಕ್ಷೆ ಆಯ್ಕೆಗಳ ಬಗ್ಗೆ ಯಾವುದೇ ಗೊಂದಲಗಳು ಇರಬಾರದು. ಪರೀಕ್ಷೆ ರದ್ದುಪಡಿಸುವ ನಿರ್ಧಾರವನ್ನು ಉನ್ನತ ಹಂತದಲ್ಲಿ ತೆಗೆದುಕೊಳ್ಳಲಾಗಿದೆ. ನ್ಯಾಯಪೀಠವೂ ಈ ನಿರ್ಧಾರವನ್ನು ತಾತ್ವಿಕವಾಗಿ ಒಪ್ಪಿಕೊಳ್ಳುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿತು.