ಟಿ20 ಕ್ರಿಕೆಟ್: ಶ್ರೀಲಂಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಕೊಲಂಬೊ, ಜು. 26: ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಸಾಂಘಿಕ ಪ್ರದರ್ಶನ ನೀಡುವ ಮೂಲಕ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ 38 ರನ್ ಗಳ ಭರ್ಜರಿ ಗೆಲುವು ಸಾಧಿಸಿತು.

ಪ್ರೇಮದಾಸ ಸ್ಟೇಡಿಯಂನಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ, 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 165 ರನ್ ಕಲೆಹಾಕಿತು. ಈ ಸವಾಲು ಬೆನ್ನತ್ತಿದ ಶ್ರೀಲಂಕಾ, ಚರಿತ ಅಸಲಂಕಾ (44) ಏಕಾಂಗಿ ಹೋರಾಟದ ನಡುವೆಯೂ 18.3 ಓವರ್ ನಲ್ಲಿ 126 ರನ್ ಗಳಿಗೆ ಆಲೌಟ್ ಆಗುವ ಮೂಲಕ 38 ರನ್ ಗಳ ಸೋಲನುಭವಿಸಿತು. ಈ ಗೆಲುವಿನೊಂದಿಗೆ ಭಾರತ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.

ಭಾರತ ನೀಡಿದ ಸವಾಲು ಬೆನ್ನತ್ತಿದ ಲಂಕಾ ಬ್ಯಾಟಿಂಗ್ ವೈಫಲ ಅನುಭವಿಸಿತು. ಆರಂಭಿಕರಾದ ಅವಿಷ್ಕಾ ಫರ್ನಾಂಡೊ(26), ಭನುಕ(10) ಬಹುಬೇಗನೆ ನಿರ್ಗಮಿಸಿದರು. ನಂತರ ಬಂದ ಧನಂಜಯ ಡಿಸಿಲ್ವಾ(9), ಭಂಡಾರ(9) ಹಾಗೂ ನಾಯಕ ದಶುನ್ ಶನಕ(16) ಜವಾಬ್ದಾರಿಯುತ ಆಟವಾಡಲಿಲ್ಲ. ಒಂದೆಡೆ ವಿಕೆಟ್ ಬೀಳುತ್ತಿದ್ದರು ತಾಳ್ಮೆಯ ಆಟವಾಡಿದ ಅಸಲಂಕ(44) ಗೆಲುವಿಗಾಗಿ ಏಕಾಂಗಿಯಾಗಿ ಹೋರಾಡಿದರು ಪ್ರಯೋಜನವಾಗಲಿಲ್ಲ. ಭಾರತದ ಪರ ಅದ್ಭುತ ಬೌಲಿಂಗ್ ದಾಳಿ ನಡೆಸಿದ ಭುವನೇಶ್ವರ್ ಕುಮಾರ್ 4 ವಿಕೆಟ್ ಪಡೆದರೆ, ದೀಪಕ್ ಚಹರ್ 2 ವಿಕೆಟ್ ಪಡೆದರು. ಉಳಿದಂತೆ ಕೃನಾಲ್‌ಪಾಂಡ್ಯ, ವರುಣ್ ಚಕ್ರವರ್ತಿ, ಚಹಲ್ ಹಾಗೂ ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಉತ್ತಮ ಆರಂಭ ಪಡೆಯಲಿಲ್ಲ. ಪೃಥ್ವಿ ಶಾ ಶೂನ್ಯಕ್ಕೆ ನಿರ್ಗಮಿಸಿದರೆ. ಸಂಜೂ ಸ್ಯಾಮ್ಸನ್(27) ಕೂಡ ಔಟಾದರು. ಬಳಿಕ ಜೊತೆಯಾದ ನಾಯಕ ಶಿಖರ್‌ಧವನ್(46) ಹಾಗೂ ಸೂರ್ಯಕುಮಾರ್‌ ಯಾದವ್(50) ತಂಡಕ್ಕೆ ಚೇತರಿಕೆ ನೀಡಿದರು. ಕೊನೆಯ ಹಂತದಲ್ಲಿ ಇಶಾನ್ ಕಿಶನ್(20) ಹಾಗೂ ಹಾರ್ದಿಕ್ ಪಾಂಡ್ಯ(10) ನೆರವಿನಿಂದ ಭಾರತ 20 ಓವರ್ ನಲ್ಲಿ 165 ರನ್ ಕಲೆಹಾಕಿತು. ಉಭಯ ತಂಡಗಳ ನಡುವಿನ ಎರಡನೇ ಏಕದಿನ ಪಂದ್ಯ ಜು.27ರಂದು ರಾತ್ರಿ 8 ಗಂಟೆಗೆ ನಡೆಯಲಿದೆ.

Exit mobile version