ತಲೆಕೂದಲಿನ ಆರೈಕೆಗೆ ಸರಳ ಮನೆಮದ್ದು

ಕೂದಲು ಉದುರುವುದು ಈಗ ಸರ್ವೇಸಾಮಾನ್ಯ ಆಗಿ ಹೋಗಿದೆ. ನಾವು ಅನೇಕ ಬಾರಿ ಅಂದುಕೊಳ್ಳುತ್ತೇವೆ, ಈ ಸಮಸ್ಯೆಗೆ ಕಾರಣ ನೀರಿನ ಬದಲಾವಣೆ ಎಂದು. ಆದರೆ ಅದೊಂದೇ ಕಾರಣವಲ್ಲ, ಅನೇಕ ಕಾರಣಗಳಿರುತ್ತವೆ.

ಅತಿಯಾಗಿ ನಿದ್ದೆಗೆಡುವುದರಿಂದ, ದೇಹದ ಉಷ್ಣಾಂಶ ಹೆಚ್ಚುವುದರಿಂದ, ತಲೆಗೆ ಹೆಲ್ಮೆಟ್ ಧರಿಸುವುದರಿಂದ, ಥೈರಾಯಿಡ್ ಸಮಸ್ಯೆಯಿಂದ, ವಿಟಮಿನ್ ಬಿ  ಕೊರತೆಯಿಂದ ಹೀಗೆ ಹತ್ತು ಹಲವಾರು ಕಾರಣಗಳಿಂದ ಕೂದಲು ಉದುರುತ್ತವೆ. ಕೂದಲು ಉದುರುವುದಕ್ಕೆ ಈ ಕಾರಣಗಳಾದರೆ, ಇನ್ನು ಸಣ್ಣ ವಯಸ್ಸಿನಲ್ಲಿಯೇ ಕೂದಲು ಬಿಳಿ ಆಗುವುದೂ ಇತ್ತೀಚೆಗೆ ಬಹಳ ಜನರಿಗೆ ಕಾಡುವಂತಹ ಸಮಸ್ಯೆಯಾಗಿದೆ. ಈ ಸಮಸ್ಯೆಗಳಿಗೆ ಕೆಲವೊಂದು ಪರಿಹಾರ ಇಲ್ಲಿದೆ.

ನಮ್ಮ ದೇಹಕ್ಕೆ ಪೋಷಕಾಂಶ ಸಹಿತ ಆಹಾರಗಳನ್ನು ತೆಗೆದುಕೊಳ್ಳುವುದರಿಂದ ಹಾಗೂ ಹೆಸರುಕಾಳನ್ನು ನೆನೆಸಿಟ್ಟುಕೊಂಡು ಅದಕ್ಕೆ ಹಾಲನ್ನು ಮಿಕ್ಸ್ ಮಾಡಿ ಜ್ಯೂಸ್ ಮಾಡಿ ಕುಡಿಯುವುದರಿಂದ ಕೂದಲು ಉದುರುವುದು ಕಮ್ಮಿಯಾಗಬಹುದು. ವಿಟಮಿನ್ ಬಿ ಇದರಲ್ಲಿರುವುದರಿಂದ ಇದು ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.

ಇನ್ನು ಕೂದಲಿಗೆ ಪೋಷಕಾಂಶವನ್ನು ನೀಡುವ ಎಣ್ಣೆಗಳನ್ನು ಮನೆಯಲ್ಲೇ ತಯಾರಿಸಿಕೊಳ್ಳಬಹುದು. ಅದರಿಂದಾಗಿ ಕೂದಲು ಬಿಳಿಯಾಗುವುದನ್ನು ತಪ್ಪಿಸಬಹುದಾಗಿದೆ ಮತ್ತು ಉದುರುವುದನ್ನು ತಪ್ಪಿಸಬಹುದಾಗಿದೆ.

ಕೂದಲಿನ ಆರೈಕೆಗೆ ಯೋಗ್ಯವಾದ ಎಣ್ಣೆಯನ್ನು ಮನೆಯಲ್ಲಿಯೇ ಹೇಗೆ ತಯಾರಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ. ನಮಗೆ ಎಷ್ಟು ಪ್ರಮಾಣದಲ್ಲಿ ಬೇಕೋ ಅಷ್ಟು ಪ್ರಮಾಣದಲ್ಲಿ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು, ಅದಕ್ಕೆ ಕಾಲು ಭಾಗದಷ್ಟು ಹರಳೆಣ್ಣೆಯನ್ನು ಮಿಕ್ಸ್ ಮಾಡಿಕೊಂಡು, ಕುದಿಯಲು ಇಟ್ಟು, ಅದಕ್ಕೆ ಗ್ರಂಥಿಕೆ ಅಂಗಡಿಯಲ್ಲಿ ಸಿಗುವ ಲಾವಂಚದ ಬೇರನ್ನು, ಸ್ವಲ್ಪ ಕರಿಬೇವಿನ ಎಲೆಯನ್ನು, ಸ್ವಲ್ಪ  ಮೆಂಥೆ ಕಾಳನ್ನು  ಇನ್ನು  ಐದಾರು ವೀಳ್ಯದ ಎಲೆಗಳನ್ನೂ  ಸಣ್ಣಗೆ ಕತ್ತರಿಸಿ ಹಾಕಿ ಚೆನ್ನಾಗಿ ಕುದಿಸಿ. ಕುದಿಸಿದ ಎಣ್ಣೆಯನ್ನು ಆರಿಸಿ ಒಂದು ಬಾಟಲಿಯಲ್ಲಿ ತುಂಬಿಸಿಟ್ಟುಕೊಂಡು ವಾರದಲ್ಲಿ 3 ಬಾರಿ ಕೂದಲಿಗೆ ಹಚ್ಚಿಕೊಂಡು ಕನಿಷ್ಠ  ಒಂದೆರಡು ಗಂಟೆಯಾದರೂ ಬಿಟ್ಟು ಸ್ನಾನ ಮಾಡುವುದರಿಂದ ಕೂದಲಿನ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ.

Exit mobile version