ತಮಿಳಿನ ಖ್ಯಾತ ಹಾಸ್ಯ ನಟ ವಿವೇಕ್ ಇನ್ನಿಲ್ಲ

ಚೆನ್ನೈ, ಏ. 17: ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ತಮಿಳು ಹಾಸ್ಯನಟ ವಿವೇಕ್ ಶನಿವಾರ ಮುಂಜಾನೆ 4.30ರ ಸುಮಾರಿಗೆ ನಿಧನರಾಗಿದ್ದಾರೆ.

ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಟ ವಿವೇಕ್ ಅವರನ್ನು ಗುರುವಾರ ಚೆನ್ನೈನ ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ವೈದ್ಯರು ಆರೋಗ್ಯ ಸ್ಥಿತಿ ಪರೀಕ್ಷಿಸಿದಾಗ ಹೃದಯಾಘಾತವಾಗಿರುವುದು ತಿಳಿದು ಬಂದಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದರು.

ವೈದ್ಯರು ಆರೋಗ್ಯ ಪರೀಕ್ಷಿಸಿದ ನಂತರ ವಿವೇಕ್ ಅವರು ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೃದ್ರೋಗ ತಜ್ಞರ ತಂಡ ನಟ ವಿವೇಕ್ ಅವರ ಆರೋಗ್ಯದ ಬಗ್ಗೆ ನಿರಂತರವಾಗಿ ಗಮನವಹಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದ ಪರಿಣಾಮ ನಿಧನರಾಗಿದ್ದಾರೆ.

ತಮಿಳು ಚಿತ್ರರಂಗದ ಬಹುಬೇಡಿಕೆ ನಟರಾಗಿದ್ದ ವಿವೇಕ್ 200ಕ್ಕೂ ಚಿತ್ರಗಳಲ್ಲಿ ಅಭಿನಯಿಸಿದ್ದರು. ಅಲ್ಲದೇ 2009ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದರು. ನಟ ರಜನಿಕಾಂತ್ ಸೇರಿದಂತೆ ಹಲವು ನಟರೊಂದಿಗೆ ವಿವೇಕ್ ಅಭಿನಯಿಸಿದ್ದರು. ಹಿರಿಯ ನಟನ ನಿಧನಕ್ಕೆ ತಮಿಳು ಸೇರಿದಂತೆ ಭಾರತೀಯ ಚಿತ್ರರಂಗದ ಹಲವರು ಕಂಬನಿ ಮಿಡಿದಿದ್ದಾರೆ.

Exit mobile version