ತಮಿಳುನಾಡು ವಿಧಾನಸಭೆ ಚುನಾವಣೆ: ಪ್ರಚಾರಕ್ಕೆ ಸಿದ್ದರಾಮಯ್ಯ ಎಂಟ್ರಿ

ಬೆಂಗಳೂರು, ಮಾ. 26: ಏಪ್ರಿಲ್ 6ರಂದು ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ನಾಳೆ ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ. ನಾಳೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಡಿಎಂಕೆ, ಕಾಂಗ್ರೆಸ್ ಮೈತ್ರಿ ಪಕ್ಷಗಳ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ತಳಿ, ಡೆಂಕಣಿಕೋಟ, ಹೊಸೂರು, ಬಾಗಲೂರು, ಬೇರಿಗೆ, ಸೂಲಗಿರಿ ಹಾಗೂ ವೇಪನಪಲ್ಲಿಯಲ್ಲಿ ಸಿದ್ದರಾಮಯ್ಯರವರು ಚುನಾವಣಾ ಪ್ರಚಾರ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಈ ಬಾರಿ ಹೇಗಾದರೂ ಅಧಿಕಾರಿ ಹಿಡಿಯಲೇಬೇಕು ಎಂದು ಹಠ ತೊಟ್ಟಿರುವ ಎಂ.ಕೆ.ಸ್ಟಾಲಿನ್​ ನೇತೃತ್ವದ ಡಿಎಂಕೆ ಕಾಂಗ್ರೆಸ್​ನೊಂದಿಗೆ ಮೈತ್ರಿಯನ್ನ ಮಾಡಿಕೊಂಡಿದೆ. ಇದೀಗ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆಗಳ ಮಹಾಪೂರವನ್ನೇ ನೀಡಿದ್ದು, ಅದರಲ್ಲೂ ಮುಖ್ಯವಾಗಿ ಸರ್ಕಾರಿ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಡಾಟಾ ಕಾರ್ಡ್​ ಜತೆ ಉಚಿತ ಕಂಪ್ಯೂಟರ್​ ಟ್ಯಾಬ್ಲೆಟ್​ ನೀಡುವ ಮತ್ತು ರಾಜ್ಯದ ಉದ್ಯಮಗಳಲ್ಲಿ ಶೇ.75ರಷ್ಟು ಉದ್ಯೋಗ ಸ್ಥಳೀಯರಿಗೇ ಮೀಸಲಿಡಬೇಕು ಎಂಬ ಕಾನೂನುನ್ನು ಹೊರತರುವುದಾಗಿ ಹೇಳಿಕೊಂಡಿದೆ. ಇದರ ಜೊತೆಗೆ ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಪೆಟ್ರೋಲ್ ಬೆಲೆಯನ್ನು ಲೀಟರ್​ಗೆ 5 ರೂ. ಮತ್ತು ಡೀಸೆಲ್​ ಬೆಲೆಯನ್ನು ಲೀಟರ್​ಗೆ 4 ರೂ.ಕಡಿಮೆ ಮಾಡುತ್ತೇವೆ. ಹಾಗೇ, ಎಲ್​​ಪಿಜಿ ಸಿಲಿಂಡರ್​ಗೆ 100 ರೂ.ಸಬ್ಸಿಡಿ ನೀಡುತ್ತೇವೆ. ಹಾಗೇ ಹಿಂದೂ ದೇವಾಲಯಗಳ ನವೀಕರಣಕ್ಕೆ 1000 ಕೋಟಿ ರೂ. ಹಾಗೂ ಚರ್ಚ್​ ಮತ್ತು ಮಸೀದಿಗಳಿಗೆ 200 ಕೋಟಿ ರೂ.ಮೀಸಲಿಡಲಾಗುವುದು ಎಂದೂ ಸ್ಟಾಲಿನ್ ತಮ ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ

Exit mobile version