ಕಿಚ್ಚ ಸುದೀಪ ಅವರ ಅಭಿಮಾನಿಗಳು ಕಟ್ಟಿರುವ ವಿಶಿಷ್ಟ ದೇಗುಲ ಎಲ್ಲಿದೆ ಗೊತ್ತಾ?

Kiccha sudeep

ಕನ್ನಡದ ಕಿಚ್ಚ ಸುದೀಪ್‌(Kichcha Sudeepa) ಎಂದರೆ ಕನ್ನಡಿಗರಿಗೆ ಏನೋ ಒಂಥರ ಹೆಮ್ಮೆ, ಎಲ್ಲೇ ಹೋದರೂ ಕನ್ನಡದ ಸಂಸ್ಕತಿಯನ್ನ ಎತ್ತಿಹಿಡಿಯುವ ಕಿಚ್ಚನಿಗೆ, ದೇಶದೆಲ್ಲೆಡೆ ಅಭಿಮಾನಿ ಬಳಗ ಅಪಾರವಿದೆ.

ದೊಡ್ಡ ದೊಡ್ಡ ಸೆಲಿಬ್ರಿಟಿಗಳು ಸುದೀಪ್‌ ಅವರ ನಟನೆಗೆ, ಮಾತಿನ ವೈಖರಿ ಹಾಗೂ ಮ್ಯಾನರಿಸಂಗೆ ಮಾರು ಹೋಗಿದ್ದಾರೆ. ಆದರೆ ಅಭಿಮಾನಿಗಳು ಒಂದು ಹೆಜ್ಜೆ ಮುಂದೆ ಹೋಗಿ ಅವರಿಗೆ ದೇವಾಲಯ ಕಟ್ಟಿ ಆರಾಧಿಸಲು ಮುಂದಾಗಿರುವುದು ಇದೀಗ ಎಲ್ಲೆಡೆ ಭಾರಿ ಸುದ್ದಿ ಮಾಡಿದೆ. ಕಿಚ್ಚನ ರಾಯಚೂರಿನ(Raichur) ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮೂರ್ತಿ ನಿರ್ಮಿಸಿ ಗುಡಿಯೊಂದನ್ನು ಕಟ್ಟುತ್ತಿದ್ದಾರೆ. ನಾವೆಲ್ಲಾ ಪರಭಾಷೆಯಲ್ಲಿ ಇಂತಹ ಆಚರಣೆಗಳನ್ನು ನೋಡಿರ್ತೀವಿ, ಆದರೆ ಇದೇ ಮೊದಲ ಬಾರಿ ಕನ್ನಡ ನಟನಿಗೆ ಇಂತಹ ಒಂದು ಭಾಗ್ಯ ಸಿಕ್ಕಿದೆ. ಇದು ನಿಜಕ್ಕೂ ಅಭಿಮಾನಿಗಳಿಂದ ಸಿಕ್ಕಿರುವ ಸೌಭಾಗ್ಯ ಎಂದೇ ಹೇಳಬಹುದು.

ರಾಯಚೂರು ಜಿಲ್ಲೆಯ, ದೇವದುರ್ಗ ತಾಲೂಕಿನ ಕುರುಕುಂದ ಗ್ರಾಮದಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳಿಂದ ದೇವಸ್ಥಾನ ನಿರ್ಮಾಣವಾಗುತ್ತಿದೆ. ಈಗಾಗಲೇ ಬಹುತೇಕ ದೇವಸ್ಥಾನದ ಕಾರ್ಯಗಳು ಮುಗಿದಿದ್ದು, ಇನ್ನು ಕೆಲವು ದಿನಗಳ ಕೆಲಸ ಬಾಕಿ ಉಳಿದಿದ್ದು, ಶೀಘ್ರದಲ್ಲಿ ಈ ದೇವಾಲಯ ಉದ್ಘಾಟನೆಗೊಂಡು ಕಿಚ್ಚನಿಗೆ ಪೂಜೆಯೂ ನಡೆಯಲಿದೆ. 12 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಗುಡಿಯಲ್ಲಿ ಗುಡಿಯೊಳಗೆ ಗಾರ್ಡನ್, ಸುತ್ತಲೂ ಕಾಂಪೌಂಡ್, ಲೈಟಿಂಗ್ ಮಾಡಲಾಗಿದೆ. ಸಿಸಿ ಕ್ಯಾಮರಾವನ್ನೂ ಕೂಡ ಅಳವಡಿಸಲಾಗಿದೆ.

ಈ ಗುಡಿಯೊಳಗೆ ವಾಲ್ಮೀಕಿ ಮೂರ್ತಿ ಹಾಗೂ ಕಿಚ್ಚ ಸುದೀಪ ಅವರ ಮೂರ್ತಿ ಇರಲಿದೆ ಎಂದು ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ದೇವರಾಜ ನಾಯಕ ವಿವರಿಸಿದ್ದಾರೆ. ಕೆಲವು ಗಣ್ಯರು 2-3 ಲಕ್ಷ ಸಹಾಯ ಮಾಡಿದ್ದು ಬಿಟ್ಟರೆ, ಉಳಿದ ಹಣವನ್ನು ಅಭಿಮಾನಿಗಳೇ ಸಂಗ್ರಹಿಸಿ ಗುಡಿ ಕಟ್ಟುತ್ತಿದ್ದಾರೆ. ಕಿಚ್ಚನ ಗುಡಿಯೊಳಗೆ ಪುನೀತ್ ರಾಜ್‌ಕುಮಾರ್(Power Star Puneeth Rajkumar) ಫೋಟೊಗೆ ಗ್ಲಾಸ್ ಫಿಟ್ಟಿಂಗ್ ಮಾಡಿ ಈ ಗುಡಿಯೊಳಗೆ ಸ್ಥಾಪನೆ ಮಾಡಿ ದೇವರಂತೆ ಪೂಜಿಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ.

ಇನ್ನು ಈ ವಿಚಾರ ತಿಳಿದು ಕಿಚ್ಚ ಸುದೀಪ್‌ ಗುಡಿಯನ್ನು ಕಟ್ಟದೆ ಇರುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಇದು ಅವರ ಸರಳತೆಯನ್ನು ತೋರಿಸುತ್ತದೆ. ಆದರೆ, ನಾವು ಪ್ರೀತಿಯಿಂದ ಕಿಚ್ಚ ಸುದೀಪ್‌ಗಾಗಿ ಮೂರ್ತಿ ನಿರ್ಮಿಸಿ ಗುಡಿ ಕಟ್ಟಿದ್ದೇವೆ. ಅವರು ಗುಡಿ ನೋಡಲು ಬರುತ್ತೇನೆ ಎಂದಿದ್ದಾರೆ. ಉದ್ಘಾಟನೆ ಯಾವಾಗ ಎಂಬ ಮಾಹಿತಿ ಇನ್ನೂ ಗೊತ್ತಿಲ್ಲ ಎಂದು ಅಭಿಮಾನಿಗಳು ಹೇಳಿದ್ದಾರೆ. ದೇವಸ್ಥಾನದ ರಕ್ಷಣೆಗೆ ಅಭಿಮಾನಿಗಳು ವಾಚ್‌ ಮ್ಯಾನ್‌ ಅನ್ನು ಕೂಡ ನೇಮಿಸಿ ತಾವೇ ಸಂಬಳ ಕೊಡಲು ನಿರ್ಧರಿಸಿದ್ದಾರೆ.

ಇಂತಹ ಅಭಿಮಾನಿಗಳನ್ನು ಪಡೆದ ನಮ್ಮ ಸಿನಿಮಾ ನಟರು ನಿಜಕ್ಕೂ ಅದೃಷ್ಟವಂತರೇ ಸರಿ.

Exit mobile version