ಹುಂಡಿ ಹಣಕ್ಕೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮೂವರ ಹತ್ಯೆ

ಮಂಡ್ಯ: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮೂವರ ಹತ್ಯೆ ಮಾಡಿದ ದುಷ್ಕರ್ಮಿಗಳು ದೇವಾಲಯದ ಹುಂಡಿಯಲ್ಲಿದ್ದ ಹಣವನ್ನು ದೋಚಿರುವ ಘಟನೆ ನಗರದ ಗುತ್ತಲಿನಲ್ಲಿರುವ ಅರ್ಕೇಶ್ವರ ದೇವಾಲಯದಲ್ಲಿ ನಡೆದಿದೆ.


ಗಣೇಶ, ಪ್ರಕಾಶ, ಆನಂದ ಕೊಲೆಯಾದವರು. ಇದರಲ್ಲಿ ಇಬ್ಬರು ಅರ್ಚಕರು, ಒಬ್ಬ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಗುರುವಾರ ತಡರಾತ್ರಿ ದೇವಾಲಯಕ್ಕೆ ನುಗ್ಗಿರುವ ದುಷ್ಕರ್ಮಿಗಳು ಮೂವರನ್ನು ಕೊಲೆ ಮಾಡಿ ನಂತರ ಹುಂಡಿ ಹೊತ್ತೊಯ್ದು ಹಣದೋಚಿದ್ದಾರೆ.


ನಂತರ ದೇವಾಲಯದ ಹೊರಗೆ ಹುಂಡಿಯನ್ನು ಬಿಸಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಹುಂಡಿ ಹಣಕ್ಕಾಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ದೇವಾಲಯದ ಆವರಣದಲ್ಲೇ ಕೊಲೆ ಮಾಡಲಾಗಿದೆ. ಈ ಸಂಬಂಧ ಮಂಡ್ಯ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಡ್ಯದ ಅರಕೇಶ್ವರ ದೇವಾಲಯದ ಮೂವರು ಅರ್ಚಕರನ್ನು ಬರ್ಬರವಾಗಿ ಹತ್ಯೆಗೈಯಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಯಾದ ಮೂವರು ಅರ್ಚಕರ ಕುಟುಂಬಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಲಾ 5 ಲಕ್ಷ ರೂ.ಪರಿಹಾರ ಘೋಷಿಸಿದ್ದಾರೆ.
ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ”ಮಂಡ್ಯದ ಅರಕೇಶ್ವರ ದೇವಸ್ಥಾನದ ಪೂಜಾರಿಗಳಾಗಿದ್ದ ಶ್ರೀ ಗಣೇಶ್, ಶ್ರೀ ಪ್ರಕಾಶ್ ಮತ್ತು ಶ್ರೀ ಆನಂದ್ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿ ದೇವಸ್ಥಾನದ ಹುಂಡಿಯನ್ನು ಕಳ್ಳತನ ಮಾಡಿರುವ ವಿಷಯ ತಿಳಿದು ಅತ್ಯಂತ ನೋವಾಗಿದೆ” ಎಂದು ಸಂತಾಪ ಸೂಚಿಸಿದ್ದಾರೆ.
ಹಾಗೆಯೇ, ”ಹತ್ಯೆಗೊಳಗಾದ ದೇವಸ್ಥಾನದ ಪೂಜಾರಿಗಳ ಕುಟುಂಬಕ್ಕೆ ತಲಾ 5.00 ಲಕ್ಷ ರೂ. ಪರಿಹಾರ ನೀಡಲಾಗುವುದು. ತಪ್ಪಿತಸ್ಥರ ವಿರುದ್ಧ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

ಈ ನಡುವೆ ಅರ್ಕೇಶ್ವರ ದೇವಾಲಯದಲ್ಲಿ ಮೂವರನ್ನು ಹತ್ಯೆ ಮಾಡಿರುವ ಪ್ರಕರಣದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳ ಪರಿಶೀಲನೆ ನಡೆಸಿ, ಘಟನೆ ಕುರಿತಂತೆ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಅವರೊಂದಿಗೆ ಚರ್ಚಿಸಿ, ಮಾಹಿತಿ ಪಡೆದರು. ಅಲ್ಲದೇ ಘಟನೆಗೆ ಕಾರಣರಾದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಸೂಚಿಸಿದ್ದಾರೆ.

Exit mobile version