ಕೊರೊನಾಕ್ಕೆ ನಾಟಿ ಮದ್ದು ನೀಡಲು ನೆಲ್ಲೂರು ಆನಂದಯ್ಯರಿಗೆ ಆಂಧ್ರ ಸರ್ಕಾರ ಒಪ್ಪಿಗೆ

ಹೈದರಾಬಾದ್‌, ಮೇ. 31: ಕೊರೊನಾ ವೈರಸ್ ವಿರುದ್ಧ ಆಯುರ್ವೇದ ಔಷಧ ನೀಡುವುದನ್ನು ಮುಂದುವರಿಸುವಂತೆ ನಾಟಿ ವೈದ್ಯ ಆನಂದಯ್ಯ ಅವರಿಗೆ ಆಂಧ್ರಪ್ರದೇಶ ಸರ್ಕಾರದ ಒಪ್ಪಿಗೆ ಸೂಚಿಸಿದೆ. ಕೊರೊನಾಗೆ ನಾಟಿ ಔಷಧ ನೀಡುವ ಮೂಲಕ ನೆಲ್ಲೂರಿನ ಕೃಷ್ಣಪಟ್ಟಣಂ ಆನಂದಯ್ಯ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿದ್ದರು. ಇದೀಗ ಭಾರೀ ಚರ್ಚೆಗಳು, ಪರೀಕ್ಷೆಗಳ ಬಳಿಕ ಕೆಲ ಷರತ್ತುಗಳೊಂದಿಗೆ ಆನಂದಯ್ಯ ಕೊರೊನಾ ಔಷಧಕ್ಕೆ ಗ್ರೀನ್​ ಸಿಗ್ನಲ್ ನೀಡಿರುವುದಾಗಿ ಆಂಧ್ರಪ್ರದೇಶದ ಸಿಎಂ ಕಚೇರಿ ತಿಳಿಸಿದೆ.

AYUSH ಸಚಿವಾಲಯದ ಕೇಂದ್ರೀಯ ಆಯುರ್ವೇದ ಪರಿಶೋಧನೆ ಸಂಸ್ಥೆ ಸಮಿತಿ ಅನುಮೋದನೆ ಮೇರೆಗೆ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಆಂಧ್ರ ಸರ್ಕಾರ ಸ್ಪಷ್ಟಪಡಿಸಿದೆ. ಆದರೆ ಕಣ್ಣಿಗೆ ಡ್ರಾಪ್ ಮಾತ್ರ ಹಾಕುವಂತಿಲ್ಲ ಎಂದು ಷರತ್ತು ವಿಧಿಸಿದೆ. ಕಣ್ಣಿಗೆ ಡ್ರಾಪ್ ಹಾಕುವ ವೈದ್ಯ ಪದ್ಧತಿಯ ಬಗ್ಗೆ ಸಂಶೋಧನಾ ವರದಿ ಬರಬೇಕಾಗಿದ್ದು, ಅದಕ್ಕೆ ಇನ್ನೂ 2-3 ವಾರ ಸಮಯ ಹಿಡಿಸುತ್ತದೆ ಎಂದು ಹೇಳಿದೆ.

ಆನಂದಯ್ಯ ನೀಡುವ ಆಯುರ್ವೇದ ಔಷಧದಿಂದ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತದೆ, ಕಡಿಮೆಯಾಗುತ್ತದೆ ಎಂಬುದಕ್ಕೆ ಇನ್ನೂ ಪುಷ್ಠಿ ದೊರೆತಿಲ್ಲ ಎಂದೂ ಸಮಿತಿ ಸ್ಪಷ್ಟಪಡಿಸಿದೆ. ಇದರೊಂದಿಗೆ ಜನ ತಮ್ಮ ಸ್ವ ಇಚ್ಛೆಯಿಂದ ಆನಂದಯ್ಯ ನಾಟಿ ಔಷಧ ಬಳಸಬಹುದು ಎಂದು ಆಂಧ್ರ ಸರ್ಕಾರ ಸ್ಪಷ್ಟಪಡಿಸಿದೆ.

Exit mobile version