ಮಾರ್ಚ್​ನಲ್ಲಿ ಗಗನಕ್ಕೇರಿದ ಸಗಟು ಹಣದುಬ್ಬರ ದರ ಶೇ 7.39

ನವದೆಹಲಿ, ಏ. 15: ಭಾರತದ ಸಗಟು ದರ ಹಣದುಬ್ಬರವು (wholesale price inflation- WPI) ಮಾರ್ಚ್ ತಿಂಗಳಲ್ಲಿ ಶೇ 7.39 ತಲುಪುವ ಮೂಲಕ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಫೆಬ್ರವರಿಯಲ್ಲಿ ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರವು ಶೇ 4.17 ಇತ್ತು. ಕೈಗಾರಿಕೆ ಇಲಾಖೆ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಮಾರ್ಚ್​​ನಲ್ಲಿ ತೈಲ ದರ ಶೇ 10.25ರಷ್ಟು ಮೇಲೇರಿದೆ. ಉತ್ಪಾದನೆ ವಸ್ತುಗಳು ಶೇ 7.34ರಷ್ಟು ಹೆಚ್ಚಳವಾಗಿದೆ. ಇನ್ನು ಆಹಾರ ವಸ್ತುಗಳ ಪೈಕಿ ದ್ವಿದಳ ಧಾನ್ಯಗಳು (ಶೇ 13.14) ಮತ್ತು ಹಣ್ಣುಗಳು (ಶೇ 16.33) ಬೆಲೆಯಲ್ಲಿ ಭಾರೀ ಏರಿಕೆ ಕಂಡಿವೆ.

ಆಹಾರ ದರಗಳಲ್ಲಿನ ಹೆಚ್ಚಳದ ಕಾರಣದಿಂದ ಭಾರತದ ಚಿಲ್ಲರೆ (ರೀಟೇಲ್) ಹಣದುಬ್ಬರ ದರವು ಮಾರ್ಚ್ ತಿಂಗಳಲ್ಲಿ ನಾಲ್ಕು ತಿಂಗಳ ಗರಿಷ್ಠ ಮಟ್ಟವಾದ ಶೇ 5.52 ತಲುಪಿತ್ತು. ಸೋಮವಾರದಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಬಿಡುಗಡೆ ಮಾಡಿದ ಅಂಕಿ- ಅಂಶದಿಂದ ಈ ದತ್ತಾಂಶ ತಿಳಿದುಬಂದಿದೆ. ಆಹಾರ ಹಣದುಬ್ಬರ ಶೇ 4.94 ಹೆಚ್ಚಾಗಿದೆ. ಈ ಬೆಲೆ ಏರಿಕೆಗೆ ಕಾರಣ ಆಗಿರುವುದು ದ್ವಿದಳ ಧಾನ್ಯಗಳು, ಮಾಂಸ, ಮೀನು ಮತ್ತು ಮೊಟ್ಟೆಯ ದರ. ಮಾರ್ಚ್ ತಿಂಗಳಲ್ಲಿ ತೈಲ ದರ ಶೇ 4.5ರಷ್ಟು ಹೆಚ್ಚಳವಾಗಿದ್ದರೆ, ಸೇವಾ ಹಣದುಬ್ಬರ ಶೇ 6.88ರಷ್ಟಿದೆ.

ಕೇಂದ್ರ ಬ್ಯಾಂಕ್​ನಿಂದ ಐದು ವರ್ಷಗಳ ಅವಧಿಗೆ ಹಣದುಬ್ಬರ- ಗುರಿಯ ವ್ಯಾಪ್ತಿಯನ್ನು ಹಾಗೇ ಉಳಿಸಿಕೊಳ್ಳಲಾಗುವುದು. ಅದು ಏಪ್ರಿಲ್ 1ರಿಂದ ಅನ್ವಯ ಆಗುತ್ತದೆ ಎಂದು ಸರ್ಕಾರ ಘೋಷಿಸಿದ ಮೇಲೆ ಹೊರಬಂದಿರುವ ಮೊಸಲ ಕಂತಿನ ಹಣದುಬ್ಬರ ದರ ಇದು. ಈಚೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಣಕಾಸು ನೀತಿ ಪರಿಶೀಲನೆ ವೇಳೆಯಲ್ಲಿ ರೆಪೋ- ರಿವರ್ಸ್ ರೆಪೋ ದರವನ್ನು ಹಾಗೇ ಉಳಿಸಿಕೊಂಡಿತ್ತು

Exit mobile version