ಕಾಬೂಲ್‌ನಲ್ಲಿ ಗಗನಕ್ಕೇರಿದ ನೀರು ಮತ್ತು ಊಟದ ಬೆಲೆ

ಕಾಬೂಲ್ ಆ 26 : ಅಫ್ಘಾನಿಸ್ತಾನವನ್ನು ತಾಲಿಬಾನ್‌ಗಳು ವಶಪಡಿಸಿಕೊಂಡ ಹಿನ್ನಲೆಯಲ್ಲಿ ಸಾಕಷ್ಟು ಮಂದಿ ಅಫ್ಘಾನಿಸ್ತಾನವನ್ನು ಬಿಟ್ಟು ಬೇರೆ ದೇಶಗಳತ್ತ ವಲಸೆ ಹೋಗುತ್ತಿದ್ದಾರೆ. ಇದೀಗ ಕಾಬೂಲ್‌ನಲ್ಲೂ ವಿದೇಶಿ ವಿಮಾನಗಳಿಗೆ ಅನುಮತಿ ಇಲ್ಲದ ಕಾರಣ ಸಾಕಷ್ಟು ಜನ ವಿಮಾನ ನಿಲ್ದಾಣದಲ್ಲೇ ಬೀಡುಬಿಟ್ಟಿದ್ದಾರೆ. ಆದರೆ ಹಲವು ದಿನಗಳಿಂದ ವಿಮಾನ ನಿಲ್ದಾಣದಲ್ಲಿರುವವರಿಗೆ ಅಗತ್ಯವಿರುವ ಊಟ ಮತ್ತು ನೀರಿನ ಬೆಲೆ ಕೂಡ ಗಗನಕ್ಕೇರಿದ್ದು, ಇದರಿಂದ ಅಲ್ಲಿ ಬೀಡುಬಿಟ್ಟಿರುವ ಮಂದಿಯ ಪರಿಸ್ಥಿತಿ ಚಿಂತಾಜನಕವಾಗಿದೆ.

ಮೂಲಗಳ ಪ್ರಕಾರ, ಸುಮಾರು 50 ಸಾವಿರ ಜನರು ಇನ್ನೂ ಕಾಬೂಲ್ ವಿಮಾನ ನಿಲ್ದಾಣದ ಹೊರಭಾಗದಲ್ಲಿ ವಿಮಾನಕ್ಕಾಗಿ ಕಾಯುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ ಇರುವ ಜನಸಂದಣಿಯನ್ನು ನೋಡಿದರೆ ಸದ್ಯಕ್ಕಂತೂ ಅವರಿಗೆಲ್ಲ ವಿಮಾನದಲ್ಲಿ ಸೀಟ್ ಸಿಗುವುದು ಅನುಮಾನವಾಗಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಕ್ರಮಣದ ನಂತರ, ಪರಿಸ್ಥಿತಿ ಹದಗೆಡುತ್ತಿದ್ದು ಅಲ್ಲಿ ಸಿಲುಕಿರುವ ಜನರು ಶೀಘ್ರವೇ ದೇಶ ತೊರೆಯಲು ಹಾತೊರೆಯುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಹೆಚ್ಚಿನ ಜನರು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ್ದಾರೆ.

ಪ್ರಸ್ತುತ ಕಾಬೂಲ್ ವಿಮಾನ ನಿಲ್ದಾಣದೊಳಗೆ 1 ನೀರಿನ ಬಾಟಲಿಗೆ 40 ಡಾಲರ್ (3 ಸಾವಿರ ರೂ), ಒಂದು ಪ್ಲೇಟ್ ಅನ್ನಕ್ಕೆ 100 ಡಾಲರ್(7,000 ರೂ.) ಇದೆ. ಯಾರ ಬಳಿ ಅಮೆರಿಕದ ಕರೆನ್ಸಿ ಇದೆಯೋ ಅವರು ಮಾತ್ರ ಇಲ್ಲಿ ಆಹಾರ, ನೀರನ್ನು ಖರೀದಿ ಮಾಡಬಹುದು. ಇದರಿಂದ ಮುಕ್ಕಾಲು ಭಾಗ ಜನರು ಹಸಿದುಕೊಂಡೇ ವಿಮಾನಕ್ಕಾಗಿ ಕಾಯುತ್ತಾ ಕೂರುವಂತಾಗಿದೆ. ಒಟ್ಟಿನಲ್ಲಿ ಕಾಬೂಲ್‌ನಲ್ಲಿ ಪ್ರಸ್ತುತ ಇರುವವರ ಸಂಕಟ ಹೇಳತೀರದ್ದಾಗಿದೆ.

Exit mobile version